Mysore
23
overcast clouds
Light
Dark

ಮೈಸೂರು-ಬೆಂಗಳೂರು ಹೈವೇ : 28 ದಿನಗಳಲ್ಲಿ 74,915 ಸಂಚಾರ ನಿಯಮ ಉಲ್ಲಂಘನೆ

ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಪ್ರತಿಗಂಟೆಗೆ 100ಕ್ಕೂ ಹೆಚ್ಚು ಸಂಚಾರ ನಿಯಮ ಉಲಂಘನೆ ಪ್ರಕರಣ ದಾಖಲಾಗುತ್ತಿದ್ದು, ಕಳೆದ 28 ದಿನಗಳಲ್ಲಿ ಒಟ್ಟು 74,915 ಪ್ರಕರಣಗಳು ದಾಖಲಾಗಿವೆ.

ಮೈಸೂರು ಬೆಂಗಳೂರು ರಸ್ತೆಯು ಒಟ್ಟು 118 ಕಿ.ಮೀ ಉದ್ದದ ಹೆದ್ದಾರಿಯಾಗಿದ್ದು, ಹೆದ್ದಾರಿಯ ಎರಡೂ ಬದಿಗಳಲ್ಲಿ ಅಳವಡಿಸಲಾಗಿರುವ 22 ಎಐ ಕ್ಯಾಮೆರಾಗಳು ಸಂಚಾರ ನಿಯಮ ಉಲ್ಲಂಘನೆ ದೃಶ್ಯಗಳನ್ನು ಸೆರೆ ಹಿಡಿದಿವೆ.

ಒಟ್ಟು ಪ್ರಕರಣಗಳಲ್ಲಿ ಚಾಲಕರು ಮತ್ತು ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸದೆ ಇರುವ ಪ್ರಕರಣೆಗಳೇ ಹೆಚ್ಚಿವೆ. 57,057 ಪ್ರಕರಣಗಳು ಸೀಟ್ ಬೆಲ್ಟ್ ಧರಿಸದ ಪ್ರಕರಣ, 10,945 ಅತಿವೇಗದ ಪ್ರಕರಣಗಳು, 6,046 ಲೇನ್ ಉಲ್ಲಂಘನೆ ಪ್ರಕರಣಗಳು ಮತ್ತು 494 ಪ್ರಕರಣಗಳು ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸಿದಕ್ಕಾಗಿ ದಾಖಲಾಗಿವೆ.

ಈ ಹೆದ್ದಾರಿಯಲ್ಲಿ ಅಪಘಾತ ಮತ್ತು ಸಂಚಾರ ನಿಯಮ ಉಲ್ಲಂಘನೆಗಳನ್ನು ತಡೆಯಲು ಪೋಲಿಸರು ತಂತ್ರಜ್ಞಾನದ ಮೋರೆ ಹೋಗಿದ್ದು, ಎಐ ಆಧಾರಿತ ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ (ಎಎನ್‌ಆರ್ ಪಿ) ಕ್ಯಾಮೆರಾಗಳನ್ನು ಪ್ರತಿ ದಿಕ್ಕಿನಲ್ಲಿ ಆರು ಸ್ಥಳಗಳಲ್ಲಿ ಅಳವಡಿಸಿದ್ದಾರೆ. ಅಲ್ಲದೇ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡ ಪ್ರತಿ ದಿಕ್ಕಿನಲ್ಲಿಯೂ ಐದು ಇತರ ಸ್ಥಳಗಳಲ್ಲಿ ವೀಡಿಯೊ ಕ್ಯಾಮೆರಾಗಳನ್ನು ಅಳವಡಿಸಿದೆ. ಜೊತೆಗೆ 100 ಕಿ.ಮೀ ವೇಗದ ಮಿತಿಯನ್ನು ನಿಗದಿಪಡಿಸಿದೆ. ಈ ರೆಸಲ್ಯೂಶನ್ ಕ್ಯಾಮೆರಾಗಳಿಂದ ಸಂಚಾರ ಉಲ್ಲಂಘನೆಗಳು ಸ್ಪಷ್ಟವಾಗಿ ತಿಳಿದುಬರುತ್ತಿದೆ. ಇವುಗಳನ್ನು ಆಧಾರಿಸಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗುತ್ತವೆ.

ಕ್ಯಾಮೆರಾಗಳಿದ್ದರೂ ಹೆದ್ದಾರಿಯಲ್ಲಿ ಸಂಚರಿಸುವವರು ನಿತ್ಯ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿದ್ದು, ಇವು ಅಪಘಾತಗಳಿಗೆ ಕಾರಣವಾಗುತ್ತಿದೆ.

ಸಂಚಾರ ಮತ್ತು ರಸ್ತೆ ಸುರಕ್ಷತೆ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಅಲೋಕ್ ಕುಮಾರ್ ಮಾತನಾಡಿ, ಕೇವಲ 28 ದಿನಗಳಲ್ಲಿ 74,000 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ರಸ್ತೆ ಸುರಕ್ಷತೆಯ ಬಗ್ಗೆ ಜನರ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಇದರಿಂದ ಅವರ ಪ್ರಾಣಕ್ಕಷ್ಟೇ ಅಲ್ಲದೆ, ಇತರರ ಪ್ರಾಣಕ್ಕೂ ಸಂಚಕಾರ ತರುತ್ತಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗಿದ್ದರೂ ಅಪಘಾತ ಪ್ರಕರಣಗಳ ಸಂಖ್ಯೆ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಹೇಳಿದರು.

ಚಾಲಕರು ಸೀಟ್‌ ಬೆಲ್ಟ್‌ ಧರಿಸದಿರುವುದು, ಅತಿವೇಗದ ಪ್ರಕರಣೆಗಳು ಹೆಚ್ಚಿವೆ. ನಿಯಮ ಉಲ್ಲಂಘಿಸಿದ ಎಲ್ಲ ವಾಹನ ಸವಾರರಿಗೂ ನೋಟಿಸ್‌ ಜಾರಿ ಮಾಡಲಾಗುವುದು. ಜೊತೆ ನಿಯಮ ಉಲ್ಲಂಘನೆಗಳ ಬಗ್ಗೆ ಸಾರ್ವಜನಿಕರ ಮೊಬೈಲ್‌ ಫೋನ್‌ಗೆ ಅಧಿಸೂಚನೆ ಕಳುಹಿಸಲಾಗುವುದು. ಇದು ನಿಯಮ ಉಲ್ಲಂಘನೆಗಳ ಬಗ್ಗೆ ಅರಿವು ಮೂಡಿಸಿದಂತಾಗುತ್ತದೆ. ನಿಯಮ ಉಲ್ಲಂಘಿಸುವವರ ವಾಹನಗಳು ಟೋಲ್‍ಗಳಿಂದ ನಿರ್ಗಮಿಸಿದಾಗ ಅವರ ಫಾಸ್ಟ್‍ಟ್ಯಾಗ್ ಖಾತೆಯ ಮೂಲಕ ದಂಡವನ್ನು ತಕ್ಷಣವೇ ಕಡಿತಗೊಳಿಸಬೇಕು ಈ ಕಾರ್ಯವಿಧಾನವು ಹೆದ್ದಾರಿಗಳಲ್ಲಿ ಸಂಚಾರ ನಿಯಮ ಉಲ್ಲಂಘನೆಯನ್ನು ಕಡಿಮೆ ಮಾಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.