ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಮೂಗಿನ ನೇರವಾಗಿಯೇ ಅಕ್ರಮ ನಡೆದಿದೆ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಹೇಳಿದರು.
ಮೈಸೂರಿನಲ್ಲಿಂದು ಕಾಂಗ್ರೆಸ್ ಸರ್ಕಾರದ ಅವಧಿಯ ಹಗರಣಗಳ ವಿರುದ್ಧ ನಡೆಸಲಾದ ಮೈಸೂರು ಚಲೋ ಪಾದಯಾತ್ರೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಮುಡಾ ಸೈಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಿಶಿಣ ಕುಂಕುಮ ರೀತಿ ಭೂಮಿ ಧಾನ ಬಂದಿರುವುದಾಗಿ ಸಿಎಂ ಹೇಳುತ್ತಿದ್ದಾರೆ. ಅದು ಸಿಎಂ ಅವರಿಗೆ ಕಾನೂನು ಬದ್ಧವಾಗಿ ಬಂದಿದ್ದರೇ ನಾವು ಪ್ರಶ್ನೆ ಮಾಡುತ್ತಿರಲಿಲ್ಲ. ಸಿಎಂ ಸಿದ್ದರಾಮಯ್ಯ ಅವರಿಗೆ ಸಿಕ್ಕಿರುವುದು ಸರ್ಕಾರಿ ಜಮೀನು. ಇದು ಕಾನೂನು ಬಾಹಿರವಾಗಿದೆ. ಹಾಗಾಗಿ ನಾವು ಪ್ರಶ್ನೆ ಮಾಡುತ್ತಿದ್ದೇವೆ ಎಂದರು.
ಮುಂದುವರೆದು, ಸಿಎಂ ಅವರು ಈಗಲೂ ನಾನು ಹದಿನಾಲ್ಕು ಸೈಟ್ ಹಿಂತಿರುಗಿಸಲು ಸಿದ್ದ ಎನ್ನುತ್ತಿದ್ದಾರಂತೆ. ಅವರು ಎಲ್ಲವನ್ನು ಮುಡಾಗೆ ಹಿಂತಿರುಗಿಸಿದರೂ ಸಹಾ ಈ ಕಾನೂನ ಬಾಹಿತ ಚಟುವಟಿಕೆಯನ್ನು ಮುಚ್ಚಿಹಾಕಲು ಸಾಧ್ಯವಾ ಎಂದು ಎಚ್‌ಡಿಕೆ ಪ್ರಶ್ನಿಸಿದರು.
ಮೈಸೂರಿನಲ್ಲಿ ನಡೆದ ಕಾಂಗ್ರೆಸ್ ಜನಾಂದೋಲನ ಕಾರ್ಯಕ್ರಮದಲ್ಲಿ ಎಚ್‌ಡಿಕೆ ಹಾಗೂ ಬಿಎಸ್‌ವೈ ಅವರ ಆಡಳಿತಾವಧಿಯ ವಿಡಿಯೋ ತುಣುಕುಗಳನ್ನು ಪ್ರಸಾರ ಮಾಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿ, ನನ್ನ ಹಾಗೂ ಬಿಎಸ್‌ವೈ ನಡುವೆ ಮಾತಿನ ಚಕಮಕಿ ನಡೆದಿದೆ. ಆದರೆ ಇಂದು ಅವೆಲ್ಲಕ್ಕೂ ಉತ್ತರ ಕೊಡುವ ನೈತಿಕತೆ ನಮಗಿದೆ ಎಂದು ಹೇಳುವ ಮೂಲಕ ಟಾಂಗ್ ಕೊಟ್ಟರು.