ಮೈಸೂರು: ಬೆಂಗಳೂರು ಅರಮನೆ ಆಸ್ತಿ ವಿಚಾರವಾಗಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲು ನಿರ್ಧಾರಿಸಿದೆ. ಆದರೆ ಈ ವಿಚಾರದಲ್ಲಿ ಸರ್ಕಾರದಿಂದ ನಮಗೆ ಯಾವುದೇ ಪರಿಹಾರ ನೀಡುವ ಅಗತ್ಯವಿಲ್ಲ, ಟಿಡಿಆರ್ ಸರ್ಟಿಫಿಕೇಟ್ ನೀಡಿದರೆ ಸಾಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ಜಿಲ್ಲೆಯ ಸುತ್ತೂರು ಕ್ಷೇತ್ರದಲ್ಲಿ ಇಂದು(ಜನವರಿ.27) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ರಾಜ ವಂಶಸ್ಥ ಯದುವೀರ್ ಅವರು, ಬೆಂಗಳೂರು ಅರಮನೆ ಆಸ್ತಿ ವಿಚಾರದಲ್ಲಿ ಸರ್ಕಾರದಿಂದ ರಾಜಮನೆತನಕ್ಕೆ ಪರಿಹಾರ ನೀಡುವ ಬದಲು ಟಿಡಿಆರ್ ನೀಡಲು ಸಾಕು. ಆದರೆ ರಾಜ್ಯ ಸರ್ಕಾರ ಈ ವಿಚಾರದಲ್ಲಿ ರಾಜಮನೆತನಕ್ಕೆ ಟಿಡಿಆರ್ ನೀಡದೇ ಜನರು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಹೀಗಾಗಿ ರಾಜಮನೆತನದಿಂದ ಕಾನೂನಾತ್ಮಕ ಹೋರಾಟ ಮಾಡಲಾಗುವುದು ಎಂದರು.
ಸರ್ಕಾರದ ಆಡಳಿತ ಅವರ ಕೈಯಲ್ಲಿ ಇದೆ. ಹಾಗಾಗಿ ಅವರು ಸುಗ್ರೀವಾಜ್ಞೆ ಹೊರಡಿಸುವ ತೀರ್ಮಾನ ಕೈಗೊಂಡಿದ್ದಾರೆ. ಆದರೆ ರಾಜಮನೆತನದ ಆಸ್ತಿ ಕುರಿತು ಸುಪ್ರೀಂಕೋರ್ಟ್‌ನ ಆದೇಶವಿದೆ. ಹೀಗಿದ್ದಾಗ ಸರ್ಕಾರದವರು ರಾಜಮನೆತನದ ಮುಂದೆ ಯಾಕೆ ಬರುತ್ತಾರೆ? ಸಾರ್ವಜನಿಕ ಹಿತದೃಷ್ಟಿಗಾಗಿ ಅಂದರೆ ನಮ್ಮ ಆಸ್ತಿನೇ ಬೇಕಾ ಎಂದು ಪ್ರಶ್ನಿಸಿದರು.
ಈ ಹಿಂದೆ ಬೆಂಗಳೂರಿನ ಸದಾಶಿವನಗರ ಸಹ ಬೆಂಗಳೂರು ಅರಮನೆ ಆಸ್ತಿಗೆ ಸೇರಿತ್ತು. ನಾವು ಈಗಾಗಲೇ ಸಾಮಾಜಿಕ ನ್ಯಾಯವಾಗಿ ಅನೇಕ ಜಮೀನನ್ನು ಬಿಟ್ಟುಕೊಟ್ಟಿದ್ದೇವೆ. ಅಲ್ಲದೇ ಸಾರ್ವಜನಿಕರಿಗೆ ಏನು ಕಾನೂನು ಇದೆಯೋ ಅದೇ ಕಾನೂನು ನಮಗೂ ಅನ್ವಯವಾಗುತ್ತದೆ. ಸರ್ಕಾರ ಸಾರ್ವಜನಿಕರಿಗೆ ಪರಿಹಾರ ನೀಡುತ್ತದೆ. ಆದರೆ ನಮಗೆ ಅದರ ಅಗತ್ಯವಿಲ್ಲ. ನಮಗೆ ಟಿಡಿಆರ್ ನೀಡಿದರೆ ಸಾಕು. ನಾವು ಸರ್ಕಾರಕ್ಕೆ ಟಿಡಿಆರ್‌ನ ಬದಲು ನಗದು ರೂಪದಲ್ಲಿ ಪರಿಹಾರ ಕೇಳಬಹುದಿತ್ತು. ಆದರೆ ಸರ್ಕಾರದ ಖಜಾನೆಗೆ ಧಕ್ಕೆಯಾಗುತ್ತದೆ ಎಂದು ಭಾವಿಸಿ ನಾವು ಟಿಡಿಆರ್‌ಗೆ ಒಪ್ಪಿಗೆ ಸೂಚಿಸಿದ್ದೇವೆ. ಇನ್ನೂ ಈ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಆದರೆ ನಮಗೆ ರಾಜ್ಯ ರಾಜ್ಯ ಸರ್ಕಾರದಿಂದ ಟಿಡಿಆರ್ ಕೊಡುವ ಮೂಲಕ ಒಂದು ಸರ್ಟಿಫಿಕೇಟ್ ಕೊಡಬೇಕೇ ಹೊರತು ಒಂದು ಪೈಸೆನೂ ನೀಡಬೇಕಾಗಿಲ್ಲ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪಾರ್ವತಿ ಸಿದ್ದರಾಮಯ್ಯ ಹಾಗೂ ಬೈರತಿ ಸುರೇಶ್ ಅವರಿಗೆ ಇ.ಡಿ.ನೋಟಿಸ್ ನೀಡಿರುವ ಬಗ್ಗೆ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಅಧಿಕ ತನಿಖೆ ನಡೆಸಲು ಅವರಿಬ್ಬರಿಗೆ ನೋಟಿಸ್ ನೀಡುವ ಪ್ರಕ್ರಿಯೆ ಆರಂಭಿಸಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣದಲ್ಲಿ ಪ್ರಾರಂಭದಿಂದಲೂ ನಮ್ಮ ಪಕ್ಷದಿಂದ ಅವರ ರಾಜೀನಾಮೆಗೆ ಆಗ್ರಹಿಸಿದ್ದೇವೆ. ಹೀಗಾಗಿ ನಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಸಿದ್ದರಾಮಯ್ಯ ಅವರು ತಮ್ಮ ಸಿಎಂ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಪುನರ್‌ಉಚ್ಚಾರ ಮಾಡಿದರು.
ಇನ್ನೂ ಮೈಕ್ರೋ ಫೈನಾನ್ಸ್ ಕಿರುಕುಳ ವಿಚಾರದ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಇದೊಂದು ಗಂಭೀರ ಪ್ರಕರಣವಾಗಿದೆ. ಹಾಗಾಗಿ ಬ್ಯಾಂಕ್‌ಗಳು ಸ್ನೇಹಮಯಿಯಾಗಿ ಕೆಲಸ ಮಾಡಬೇಕು. ಸಾರ್ವಜನಿಕರಿಗೆ ಕಿರುಕುಳ ನೀಡಬಾರದು. ರಾಜ್ಯಗಳಲ್ಲಿ ಮೈಕ್ರೋ ಫೈನಾನ್ಸ್‌ಗಳಿಂದ ಸಾರ್ವಜನಿಕರಿಗಾಗಿ ಆಗಿರುವ ಘಟನೆ ನಿಜವಾಗಿಯೂ ಖಂಡನೀಯ ಎಂದು ತಿಳಿಸಿದರು.