Mysore
28
few clouds

Social Media

ಮಂಗಳವಾರ, 27 ಜನವರಿ 2026
Light
Dark

ಜಾತಿಗಣತಿ ಕೈಬಿಡಲು ಸಂಸದ ಯದುವೀರ್‌ ಆಗ್ರಹ

yaduveer

ಮೈಸೂರು : ದಸರಾ ರಜೆ ಇರುವ ವೇಳೆ ಹಿಂದುಳಿದ ವರ್ಗಗಳ ಜಾತಿಗಣತಿ ಕೈಗೊಂಡಿರುವುದು ಅವೈಜ್ಞಾನಿಕವಾಗಿದ್ದು, ಕೇಂದ್ರ ಸರ್ಕಾರವು ಜನಗಣತಿ ನಡೆಸುವುದಾಗಿ ಘೋಷಣೆ ಮಾಡಿರುವುದರಿಂದ ರಾಜ್ಯ ಸರ್ಕಾರ ಕೈಗೊಂಡಿರುವ ಸಮೀಕ್ಷೆಯನ್ನು ಕೈಬಿಡಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಒತ್ತಾಯಿಸಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ರಜೆಯ ಸಮಯದಲ್ಲಿ ಕುಟುಂಬಗಳು ಪ್ರವಾಸ ಸೇರಿದಂತೆ ನಾನಾ ಕಾರಣಗಳಿಗೆ ಮನೆಯಿಂದ ಹೊರಗೆ ಹೋಗುವು ದರಿಂದ ಅವರು ಗಣತಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಿದ್ದರೂ ರಾಜ್ಯ ಸರ್ಕಾರ ರಜಾ ದಿನಗಳಲ್ಲಿ ಜಾತಿ ಗಣತಿಯನ್ನು ಕೈಗೆತ್ತಿಕೊಂಡಿರುವುದು ಸರಿಯಲ್ಲ. ಅಲ್ಲದೆ, ಗಣತಿಗಾರರಿಗೆ ಸರಿಯಾದ ತರಬೇತಿ ನೀಡದೆ ತರಾತುರಿಯಲ್ಲಿ ಗಣತಿ ಮಾಡಲು ಮುಂದಾಗಿದೆ ಎಂದು ಟೀಕಿಸಿದರು.

ಈ ಹಿಂದೆ ರಾಜ್ಯ ಸರ್ಕಾರವು ಪಕ್ಷದ ಕೇಂದ್ರ ನಾಯಕರ ಒತ್ತಡದಿಂದ ಕೋಟ್ಯಂತರ ರೂ. ವ್ಯಯಿಸಿ ಕೈಗೊಳ್ಳಲಾದ ಕಾಂತರಾಜು ಮತ್ತು ಕೆ.ಜಯಪ್ರಕಾಶ್ ಹೆಗ್ಡೆ ವರದಿಗಳನ್ನು ತಿರಸ್ಕರಿಸಿತು. ತನ್ಮೂಲಕ ಜನರ ತೆರಿಗೆ ಹಣವನ್ನು ವ್ಯರ್ಥವಾಗಿ ಖರ್ಚು ಮಾಡಿದ್ದಲ್ಲದೇ ಈಗ ಮತ್ತೊಮ್ಮೆ ಜಾತಿಗಣತಿ ಕೈಗೊಳ್ಳುವ ಮೂಲಕ ಮತ್ತಷ್ಟು ದುಂದುವೆಚ್ಚ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ತನ್ನ ವೈಫಲ್ಯಗಳನ್ನು ಮರೆಮಾಚಿ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಜಾತಿ ಗಣತಿ ಯನ್ನು ಬಳಸಿಕೊಳ್ಳುತ್ತಿದೆ. ರಾಜ್ಯದಲ್ಲಿ ಬಂಡವಾಳ ವೆಚ್ಚವು ಶೂನ್ಯಕ್ಕೆ ಇಳಿದಿದೆ. ರಾಜ್ಯ ಸರ್ಕಾರದ ಖಜಾನೆ ಶೂನ್ಯವಾಗಿದೆ ಎಂದು ಟೀಕಿಸಿದರು.

ಬಿಜೆಪಿಯು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ರಾಜ್ಯ ಸರ್ಕಾರದ ಅವೈeನಿಕ ಜಾತಿ ಸಮೀಕ್ಷೆಯನ್ನು ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ವಿರೋಧಿಸುತ್ತದೆ ಎಂದರು. ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿದರು. ಬಿಜೆಪಿ ನಗರ ಅಧ್ಯಕ್ಷ ಎಲ್.ನಾಗೇಂದ್ರ, ಮಾಜಿ ಮಹಾಪೌರ ಶಿವಕುಮಾರ್ ಹಾಗೂ ಇತರ ಮುಖಂಡರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Tags:
error: Content is protected !!