ಎಚ್.ಡಿ.ಕೋಟೆ : ರೈತ ಹೊಸ ಮನೆ ಕಟ್ಟಿಕೊಂಡು ಗೃಹಪ್ರವೇಶ ನಡೆಸಿದ ದಿನದಂದೇ ದುಷ್ಕರ್ಮಿಗಳು ಹಳೆಯ ಮನೆಗೆ ಬೆಂಕಿ ಹಚ್ಚಿದ ಪರಿಣಾಮ ೪ ಹಸುಗಳು ಸಾವಿಗೀಡಾಗಿ, ೧೫ ಲಕ್ಷ ರೂ. ಮೌಲ್ಯದ ಪದಾರ್ಥಗಳು ಸುಟ್ಟು ನಾಶವಾಗಿವೆ.
ತಾಲ್ಲೂಕಿನ ಅಡ್ಡಳ್ಳಿ ಗ್ರಾಮದ ರೈತ ದೇವೇಶ ಗ್ರಾಮದಲ್ಲಿ ಹೊಸ ಮನೆ ಕಟ್ಟಿಕೊಂಡು ಶುಕ್ರವಾರ ಗೃಹಪ್ರವೇಶ ನಡೆಸಿದ್ದರು. ಸಮೀಪದಲ್ಲಿ ಇದ್ದ ಹಳೆ ಮನೆಯಿಂದ ಹೊಸ ಮನೆಗೆ ಸ್ಥಳಾಂತರವಾಗಲು ಸಿದ್ಧತೆ ನಡೆಸುತ್ತಿದ್ದರು. ಆದರೆ, ಗುರುವಾರ ರಾತ್ರಿ ೧೨ರ ಸಂದರ್ಭದಲ್ಲಿ ದುಷ್ಕರ್ಮಿಗಳು ದೇವೇಶ ಅವರ ಹಳೇ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.
ಹೊಸ ಮನೆಯ ಗೃಹಪ್ರವೇಶ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದ ಕುಟುಂಬಸ್ಥರು ಹಳೇ ಮನೆಯಲ್ಲಿ ಬೆಂಕಿಯನ್ನು ಕಂಡು, ಆಗಮಿಸಿ ನೋಡಿದಾಗ ಬೆಂಕಿಯ ಕೆನ್ನಾಲಿಗೆಗೆ ಮನೆಯೊಳಗಿದ್ದ ನಾಲ್ಕು ಹಸುಗಳು ಸಿಲುಕಿ ಸಾವಿಗೀಡಾಗಿದ್ದವು. ಅಲ್ಲದೆ, ರೈತರು ಬೆಳೆದಿಟ್ಟಿದ್ದ ಜಿಯಾ ಮುಸುಕಿನ ಜೋಳ, ರಾಗಿ, ಭತ್ತ ಹಾಗೂ ಅನೇಕ ಮರದ ಸಾಮಗ್ರಿಗಳು ನಾಶವಾಗಿವೆ. ಸುಮಾರು ೧೫ ಲಕ್ಷ ರೂ. ನಷ್ಟವಾಗಿದೆ ಎಂದು ತಿಳಿದುಬಂದಿದೆ.
ನಂತರ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಲು ಪ್ರಯತ್ನಪಟ್ಟರೂ ಸಾಧ್ಯವಾಗಿಲ್ಲ. ಪಶು ವೈದ್ಯ ಇಲಾಖೆಯವರು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರೈತ ದೇವೇಶ ಅವರ ಬೆಳವಣಿಗೆ ಸಹಿಸಲಾಗದೆ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ಹಸುಗಳು, ದವಸ-ಧಾನ್ಯ, ಮರಗಳು ಎಲ್ಲಾ ನಾಶವಾಗಿವೆ. ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಬೇಕಾಗಿದೆ. ಈ ಘಟನೆಯಿಂದಾಗಿ ಗ್ರಾಮದಲ್ಲಿ ಆತಂಕ ಉಂಟಾಗಿದೆ ಎಂದು ರೈತ ಮುಖಂಡ ನಂದಕುಮಾರ್ ಹೇಳಿದ್ದಾರೆ.





