Mysore
22
broken clouds

Social Media

ಶುಕ್ರವಾರ, 11 ಜುಲೈ 2025
Light
Dark

ಸಚಿವ ಮಹದೇವಪ್ಪ ದಲಿತ ವಿರೋಧಿ ಅಲ್ಲ

ತಿ.ನರಸೀಪುರ: ಸಾಮಾಜಿಕ ಜಾಲತಾಣ, ವಾಟ್ಸಾಪ್‌ಗಳಲ್ಲಿ ಸಚಿವ ಎಚ್. ಸಿ.ಮಹದೇವಪ್ಪ ದಲಿತ ವಿರೋಧಿ ಎಂದು ಕೆಲ ಸಂಘಟನೆ ಮುಖಂಡರು ಆಪಾದನೆ ಮಾಡುತ್ತಿದ್ದು, ವಾಸ್ತವವಾಗಿ ಸಚಿವ ಮಹದೇವಪ್ಪ ದಲಿತ ವಿರೋಧಿ ಅಲ್ಲ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ ಗೋವಿಂದರಾಜು ಹೇಳಿದರು.

ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕೇವಲ ಒಂದು ಸಣ್ಣ ಘಟನೆಯನ್ನು ಗಮನದಲ್ಲಿಟ್ಟುಕೊಂಡು ಅವರನ್ನು ದಲಿತ ವಿರೋಧಿ ಎಂದು ಬಿಂಬಿಸುವುದು ಸಮಂಜಸವಲ್ಲ. ದಲಿತ ಸಮುದಾಯದ ವಿಚಾರ ಬಂದಾಗ ಯಾವುದೇ ಮರ್ಜಿಗೆ ಒಳಗಾಗದೆ ಸ್ವತಂತ್ರ ಹೇಳಿಕೆ ನೀಡುವ ಏಕೈಕ ವ್ಯಕ್ತಿ ಮಹದೇವಪ್ಪ ಎಂದರು.

ಅಲ್ಲದೆ ರಾಜ್ಯದಲ್ಲಿ ಸಂವಿಧಾನ ಪೀಠಿಕೆ ಪಠಣ, ಅಂತಾರಾಷ್ಟ್ರೀಯ ಸಂವಿಧಾನ ದಿನಾಚರಣೆ, ದೆಹಲಿ ಮಾದರಿಯಲ್ಲಿ ಕರ್ನಾಟಕ ರಾಜ್ಯದ ಶಕ್ತಿ ಕೇಂದ್ರದ ಮುಂದೆ ಡಾ. ಅಂಬೇಡ್ಕರ್ ಪುತ್ಥಳಿ ನಿರ್ಮಾಣದ ಸಂಕಲ್ಪ ಮತ್ತು ದೇಶದಲ್ಲಿ ದಲಿತ ಮಕ್ಕಳು ಐಎಎಸ್, ಐಪಿಎಸ್ ಮತ್ತು ಐಆರ್‌ಎಸ್ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲು ದಲಿತರಿಗಾಗಿ ತರಬೇತಿ ಕೇಂದ್ರ ಸ್ಥಾಪನೆಗೆ ಯೋಜನೆ ಇದು ಅವರ ದಲಿತ ಪರ ಕಾಳಜಿಯೇ ಹೊರೆತು ವಿರೋಧಿತನವಲ್ಲ ಎಂದರು.

ಮೈಸೂರು ನಗರದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 23.75ಕೋಟಿ ಅನುದಾನ, ರಾಜ್ಯದಲ್ಲಿ ಹೆಚ್ಚುತ್ತಿರುವ ದೌರ್ಜನ್ಯ ತಡೆಗಾಗಿ 33 ದಲಿತ ಪೊಲೀಸ್ ಠಾಣೆಗಳ ನಿರ್ಮಾಣಕ್ಕೆ ಕಾಳಜಿ ವಹಿಸಿರುವ ಸಚಿವ ಮಹದೇವಪ್ಪ ಅವರನ್ನು ವಾಟ್ಸಾಪ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈಯುಕ್ತಿಕ ನಿಂದನೆ ಮತ್ತು ತೇಜೋವಧೆ ಮಾಡುತ್ತಿರುವುದು ಖಂಡನೀಯ ಎಂದರು.

ಸುದ್ದಿಗೋಷ್ಠಿಯಲ್ಲಿ ದಸಂಸ ಜಿಲ್ಲಾ ಸಂಚಾಲಕರಾದ ಯರಗನಹಳ್ಳಿ ಸುರೇಶ್, ಮಲ್ಲೇಶ್ ಚುಂಚನಹಳ್ಳಿ, ಕೃಷ್ಣ ಕೊಳಗಟ್ಟ, ಪುಟ್ಟಸ್ವಾಮಿ ದೇವರಸನಹಳ್ಳಿ ಇತರರು ಹಾಜರಿದ್ದರು.

Tags:
error: Content is protected !!