ಮೈಸೂರು : ಮೈಸೂರಿಗೆ ಸ್ವಚ್ಛ ನಗರಿ ಎಂದು ಹೆಸರು ಬರಲು ಪೌರ ಕಾರ್ಮಿಕರ ಕೊಡುಗೆ ಅಪಾರವಾಗಿದೆ. ಇಂದು ನೀವೆಲ್ಲಾ ಈಗ ಸರ್ಕಾರಿ ನೌಕರರಾಗಿ ಕಾಯಂ ಆಗುತ್ತಿದ್ದೀರಿ. ಸರ್ಕಾರಿ ನೌಕರರಿಗೆ ಸಿಗುವ ಎಲ್ಲಾ ಸೌಲಭ್ಯ ನಿಮಗೆ ಸಿಗುತ್ತದೆ ಎಂದು ಸಮಾಜ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್ ಸಿ ಮಹದೇವಪ್ಪ ಹೇಳಿದರು.
ಇಂದು(ಜೂ.20) ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಆಯೋಜಿಸಲಾಗಿದ್ದ, “ಪೌರಕಾರ್ಮಿಕರಿಗೆ ಕಾಯಂ ನೇಮಕಾತಿ ಪತ್ರ ವಿತರಣೆ ಕಾರ್ಯಕ್ರಮ” ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನದ ಆಶಯವೇ ಕಟ್ಟ ಕಡೆಯ ಮನುಷ್ಯನಿಗೆ ಮೊಟ್ಟಮೊದಲ ಆದ್ಯತೆ ನೀಡುವುದೇ ಆಗಿದೆ. ನಮ್ಮ ಸರ್ಕಾರ ಪೌರಕಾರ್ಮಿಕರ ಪರವಾಗಿದ್ದು ನಿಮಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸುತ್ತೇವೆ ಎಂದು ಹೇಳಿದರು.
ನಿಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು. ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಎಲ್ಲರೂ ವಿದ್ಯಾಂತರಾಗಬೇಕು. ಸರ್ಕಾರದಿಂದ ಅನೇಕ ಯೋಜನೆಗಳಿವೆ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಮಾತನಾಡಿ, ಮೊಟ್ಟ ಮೊದಲಿಗೆ ಇದು ನಿಮ್ಮ ಕಾರ್ಯಕ್ರಮ. ನಿಮ್ಮ ಪ್ರಯತ್ನಕ್ಕೆ ಜಯ ಸಿಕ್ಕಿರುವುದಕ್ಕೆ ಅಭಿನಂದನೆಗಳು. ಇಡೀ ರಾಷ್ಟ್ರದಲ್ಲಿ ಲಕ್ಷಾಂತರ ಪೌರ ಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟು ನಡೆದುಕೊಂಡಿದ್ದರಿಂದ ನಿಮ್ಮ ಕನಸು ನನಸಾಗಿದೆ ಎಂದು ಹೇಳಿದರು.
ಮಾಜಿ ಮೇಯರ್ ನಾರಾಯಣ್ ಮಾತನಾಡಿ, ದೇಶದ ಯಾವುದೇ ರಾಜ್ಯದಲ್ಲಿಯೂ ಖಾಯಂಗೊಳಿಸುವಿಕೆ ಆಗಿಲ್ಲ. ಎಷ್ಟೋ ಕಡೆಗಳಲ್ಲಿ ಗುತ್ತಿಗೆ ಪದ್ದತಿಯನ್ನೇ ರದ್ದುಪಡಿಸಲಾಯಿತು. ಈಗಿನ ಸರ್ಕಾರ ಪೌರಕಾರ್ಮಿಕರನ್ನು ಖಾಯಂ ಮಾಡಿದೆ. ಎಲ್ಲಾ ಪೌರ ಕಾರ್ಮಿಕರು ಇದನ್ನು ಸದುಪಯೋಗಪಡಿಸಿಕೊಂಡು ನಿಮ್ಮ ಮಕ್ಕಳಿಗೂ ಭವಿಷ್ಯವನ್ನು ರೂಪಿಸುವಂತೆ ಕೆಲಸವನ್ನು ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಾದೇಶಿಕ ಆಯುಕ್ತರಾದ ಡಿ.ಎಸ್.ರಮೇಶ್, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ್ ರೆಡ್ಡಿ, ಮಹಾನಗರ ಪಾಲಿಕೆಯ ಆಯುಕ್ತರಾದ ಶೇಖ್ ತನ್ವೀರ್ ಆಸಿಫ್ ಹಾಗೂ ಮತ್ತಿತರು ಉಪಸ್ಥಿತರಿದ್ದರು.



