ಮೈಸೂರು : ಬೈಕ್’ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮಿನಿಬಸ್ ವೊಂದು ಪಲ್ಟಿ ಹೊಡೆದು 10 ಮಂದಿ ಗಾಯಗೊಂಡಿರುವ ಘಟನೆ ನಂಜನಗೂಡು-ಚಾಮರಾಜನಗರ ಬೈಪಾಸ್ ರಸ್ತೆಯಲ್ಲಿ ನಡೆದಿದೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯಿಂದ ಮಿನಿ ಬಸ್ ವೊಂದು 21 ಮಂದಿ ಪ್ರವಾಸಿಗರನ್ನು ಹೊತ್ತು ಮೈಸೂರಿಗೆ ಬಂದಿತ್ತು. ಪ್ರವಾಸಿಗರು ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ದರ್ಶನ ಮುಗಿಸಿ ಮೈಸೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಲ್ಲಾ 10 ಮಂದಿಗೂ ಕೈ ಮತ್ತು ಕಾಲುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ನಂಜನಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಘಟನೆ ಸಂಬಂಧ ನಂಜನಗೂಡು ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.