Mysore
26
scattered clouds

Social Media

ಶುಕ್ರವಾರ, 17 ಏಪ್ರಿಲ 2026
Light
Dark

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ : ವಿಎಫ್‌ಎಕ್ಸ್‌, ಗ್ರಾಫಿಕ್ಸ್‌ಗೆ ನೆರೆರಾಜ್ಯಗಳತ್ತ ಐಟಿ ನಗರದ ಸಿನಿಮಂದಿ

ವೈಡ್‌ ಆಂಗಲ್‌

ನಿರ್ದೇಶಕ ಚೈತನ್ಯ ಇಮ್ಮಡಿ ಪುಲಿಕೇಶಿಯ ಜೀವನ ಯಾನವನ್ನು ಮುಂಬೈ ಮೂಲದ ನಿರ್ಮಾಣ ಸಂಸ್ಥೆಗಾಗಿ ಬೆಳ್ಳಿತೆರೆಗೆ ನಿರ್ದೇಶಿಸಲಿದ್ದಾರೆ. ಅದರ ಕುರಿತಂತೆ ಸಂಶೋಧನೆ, ಪೂರ್ವಸಿದ್ಧತೆ ನಡೆದಿದ್ದು, ಭಾರತದ ಬಹುತೇಕ ಭಾಷೆಗಳಲ್ಲಿ ಅದು ತೆರೆಗೆ ಬರಲಿದೆ. ಚಿತ್ರದ ಹೆಸರು ‘ಎರೆಯ’. ಅದು ಪುಲಿಕೇಶಿಯ ಜನ್ಮನಾಮ ಎನ್ನಲಾಗಿದೆ. ‘ಇಮ್ಮಡಿ ಪುಲಿಕೇಶಿ’ ಚಿತ್ರ ಕನ್ನಡದಲ್ಲೂ ತೆರೆಗೆ ಬಂದಿತ್ತು. ೧೯೬೭ರಲ್ಲಿ. ಸಂಗೀತ ಸಂಯೋಜಕ ಜಿ. ಕೆ. ವೆಂಕಟೇಶ್ ಅವರಿಗಾಗಿ ಎನ್. ಸಿ. ರಾಜನ್ ಈ ಚಿತ್ರವನ್ನು ನಿರ್ದೇಶಿಸಿದ್ದರು. ಪುಲಿಕೇಶಿಯಾಗಿ ರಾಜಕುಮಾರ್ ನಟಿಸಿದ್ದರು.

ಚೈತನ್ಯ ಅವರು ಇದೀಗ ವಿನೋದ್ ಪ್ರಭಾಕರ್ ಮುಖ್ಯ ಭೂಮಿಕೆಯ ‘ಬಲರಾಮನ ದಿನಗಳು’ ಚಿತ್ರದ ಅಂತಿಮ ಹಂತದ ಕೆಲಸವನ್ನೂ ಪೂರೈಸುತ್ತಿದ್ದಾರೆ. ಅದರ ಗ್ರಾಫಿಕ್ಸ್ ಕೆಲಸ ನಡೆದಿದೆ ಎಂದರು. ಅದು ಇಲ್ಲಲ್ಲ. ಮುಂಬೈನಲ್ಲಿ. ಗ್ರಾಫಿಕ್ಸ್, ವಿಎಫ್‌ಎಕ್ಸ್‌ಗಾಗಿ ಐಟಿ ನಗರ ಎಂದೇ ಹೆಸರಾದ ಇಲ್ಲಿನ ಮಂದಿ ಇತರ ರಾಜ್ಯಗಳನ್ನು ಆಶ್ರಯಿಸಬೇಕಾಗಿ ಬಂದದ್ಧು ಮಾತ್ರ ಚೋದ್ಯವೇ ಸರಿ. ‘ಹೆಸರು ಕ್ಷೀರಸಾಗರ ಭಟ್ಟ, ಮಜ್ಜಿಗೆ ನೀರಿಗೆ ಗತಿಯಿಲ್ಲ’ ಎನ್ನುವ ಗಾದೆ ಮಾತನ್ನು ಇದು ನೆನಪಿಸುತ್ತದೆ.

ಮುಂಬೈನಲ್ಲಿ ಅವರಿಗೆ ಸಿಜಿ (ಕಂಪ್ಯೂಟರ್ ಗ್ರಾಫಿಕ್ಸ್) ಮಾಡಿ ಕೊಡುವವರು ಕನ್ನಡದವರೇ ಅಂತೆ. ಸಾಕಷ್ಟು ಮಂದಿ ಕನ್ನಡಿಗರು ದೇಶದ ಬೇರೆ ರಾಜ್ಯಗಳಲ್ಲಿ, ಬೇರೆ ದೇಶಗಳಲ್ಲಿ ಇಂತಹ ವೃತ್ತಿಗಳಲ್ಲಿದ್ದಾರೆ. ತಾವೇ ಸ್ವತಃ ಒಡೆತನ ಹೊಂದಿರುವುದು ಇದೆ. ಬೆಂಗಳೂರಿನಲ್ಲಿ ಹಾಲಿವುಡ್ ಚಿತ್ರಗಳ ಕೆಲಸಗಳು ನಡೆಯುತ್ತವೆ ಎನ್ನುವ ದಿನಗಳಿಂದ, ಈಗ ಈ ಕೆಲಸಗಳಿಗಾಗಿ ಹೊರ ರಾಜ್ಯಗಳತ್ತ ಮುಖ ಮಾಡಬೇಕಾಗಿ ಬಂದಿರುವುದನ್ನು ಚಿತ್ರೋದ್ಯಮ, ಇಲ್ಲಿನ ಉದ್ಯಮಶೀಲರು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೋ ಗೊತ್ತಿಲ್ಲ.

‘ಲಯನ್ ಕಿಂಗ್’ನಂತಹ ಹಾಲಿವುಡ್ ಚಿತ್ರದ ಎಲ್ಲ ಕೆಲಸಗಳೂ ಬೆಂಗಳೂರಿನಲ್ಲಿಯೇ ನಡೆದಿತ್ತು. ಆದರೆ ಆ ಚಿತ್ರ ಮತ್ತು ಅಂತಹದೇ ಚಿತ್ರಗಳಿಗೆ ಕೆಲಸ ಮಾಡುತ್ತಿದ್ದ ಸ್ವೀಡನ್ ಮೂಲದ ಆ ಸಂಸ್ಥೆ ಇದೀಗ ಬಾಗಿಲು ಮುಚ್ಚಿದೆ. ಅಂತಹದೊಂದು ಸಂಸ್ಥೆ ಬೆಂಗಳೂರಿನಲ್ಲಿ ಇತ್ತು; ಹಾಲಿವುಡ್ ಚಿತ್ರಗಳಿಗೆ ಕೆಲಸ ಮಾಡುತ್ತಿತ್ತು ಎನ್ನುವುದು ಬಹಳ ಮಂದಿ ಕನ್ನಡ ಚಿತ್ರೋದ್ಯಮಿಗಳಿಗಾಗಲಿ, ತಂತ್ರಜ್ಞರಿಗಾಗಲಿ ತಿಳಿದೇ ಇರಲಿಲ್ಲ. ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಆವೃತ್ತಿಯೊಂದರಲ್ಲಿ ಆ ಸಂಸ್ಥೆ ‘ಲಯನ್ ಕಿಂಗ್’ ಚಿತ್ರ ತಯಾರಾದ ಪ್ರಾತ್ಯಕ್ಷಿಕೆಯನ್ನು ತೋರಿಸಿದಾಗಲೇ ಅದರ ಕುರಿತಂತೆ ಬಹಳಷ್ಟು ಮಂದಿಗೆ ತಿಳಿದದ್ದು.

ಅಬ್ಬಾಯಿ ನಾಯ್ಡು ಅವರ ಮಧು ಆರ್ಟ್ಸ್ ಸ್ಟುಡಿಯೋದ ಆವರಣದಲ್ಲಿ ಇಂತಹ ಕೆಲಸಗಳಿಗೆಂದೇ ಮೀಸಲಾದ ಯುನಿಫೈ ಸಂಸ್ಥೆ ಇತ್ತು. ಸಾಕಷ್ಟು ಕನ್ನಡ ಚಿತ್ರಗಳಿಗೆ ಅಲ್ಲಿ ಸಿಜಿ, ವಿಎಫ್‌ಎಕ್ಸ್‌ಗಳನ್ನು ಮಾಡಿಸುತ್ತಿದ್ದರು. ಆದರೆ ಅದು ಬಾಗಿಲು ಮುಚ್ಚಿ ಅದಾಗಲೇ ಎರಡು ವರ್ಷಗಳಾಗುತ್ತಾ ಬಂತು! ಬೆಂಗಳೂರಿನಲ್ಲಿ ಈಗ ಇಂತಹ ಕೆಲಸ ಮಾಡಿಕೊಡುವ ಸ್ಟುಡಿಯೋ, ಮೂಲಗಳ ಪ್ರಕಾರ ಒಂದೇ. ಪಿನಾಕ. ರಕ್ಷಿತ್ ಶೆಟ್ಟಿ ಅವರ ಸ್ಟುಡಿಯೋ ಇದು ಎನ್ನಲಾಗಿದೆ. ಅಲ್ಲಿ ಸಾಕಷ್ಟು ಚಿತ್ರಗಳ ಸಿಜಿ ಮತ್ತು ವಿಎಫ್‌ಎಕ್ಸ್ ಕೆಲಸಗಳು ನಡೆಯುತ್ತವೆ.

ಹ್ಞಾಂ, ಇಂತಹ ಕೆಲಸಗಳನ್ನು ಮಾಡಿಕೊಡುವ ಹತ್ತಾರು, ನೂರಾರು ಮಂದಿ ತಜ್ಞರಿರುವ ಸ್ಟುಡಿಯೋ ಬೆಂಗಳೂರಿನಲ್ಲಿ ಇಲ್ಲ. ಹಾಗಂತ ಕೆಲಸ ಮಾಡುವವರು ಇಲ್ಲ ಎಂದಲ್ಲ. ಸಾಮಾನ್ಯವಾಗಿ ಈ ಕೆಲಸಗಳ ಪ್ರಾಥಮಿಕ ಜ್ಞಾನ ಬರುತ್ತಲೇ, ತಾವೇ ಸ್ವಯಂ ಉದ್ಯೋಗವಾಗಿ ಇದನ್ನು ಮಾಡುವವರೇ ಹೆಚ್ಚು. ದೊಡ್ಡದೊಡ್ಡ ಸಂಸ್ಥೆಗಳಲ್ಲಿ ಕೆಲಸ ಮಾಡಿ, ಅನುಭವ ಪಡೆದು ಹೊರಬಂದು ಹೀಗೆ ಕೆಲಸ ಮಾಡುವವರು ಸಾಕಷ್ಟು ಮಂದಿ ಇದ್ದಾರೆ, ಆದರೆ ಅವರು ಬೇರೆ ದೊಡ್ಡ ಕಡೆ ಕೆಲಸ ಮಾಡುವುದಿಲ್ಲ, ಎಲ್ಲ ಫ್ರೀಲ್ಯಾನ್ಸ್ ಕೆಲಸ ಎನ್ನುತ್ತಾರೆ ಸ್ಟುಡಿಯೋ ಮಾಲೀಕರೊಬ್ಬರು.

ಇನ್ನು ದೊಡ್ಡದೊಡ್ಡ ಸಂಸ್ಥೆಗಳು ಎನ್ನಿಸಿಕೊಂಡವು, ಅವುಗಳ ಮಧ್ಯವರ್ತಿಗಳು, ಅವರಿಂದಾಗಿ ಕೆಲವು ಅದ್ಧೂರಿ ಕನ್ನಡ ಚಿತ್ರಗಳಿಗಾದ ತೊಂದರೆಯ ಕುರಿತು ಸಾಕಷ್ಟು ಮಂದಿಗೆ ಗೊತ್ತು. ವಿಶೇಷವಾಗಿ ‘ಮಾರ್ಟಿನ್’ ಮತ್ತು ‘೪೫’ ‘ಮಾರ್ಟಿನ್’ ಚಿತ್ರದ ಸಿಜಿಗಾಗಿ ಮುಂಗಡ ಪಡೆದು ನಾಪತ್ತೆಯಾದ ಪ್ರಸಂಗ, ಅದರ ನಂತರ ಪೊಲೀಸ್ ಕೇಸ್, ಹೀಗೆ ಬೆಳವಣಿಗೆಗಳಾದವು. ಅದರಲ್ಲಿ ಸಂಬಂಧಪಟ್ಟ ತಂತ್ರಜ್ಞರು, ಕಮಿಷನ್ ಇತ್ಯಾದಿ ಸುದ್ದಿ ಆಸಕ್ತ ಸುದ್ದಿವಾಹಿನಿಗಳಿಗೆ ಸಾಕಷ್ಟು ಗ್ರಾಸ ಒದಗಿಸಿತ್ತು. ಡಿಜಿಟಲ್‌ಗೆ ಸಿನಿಮಾ ಹೊರಳಿದ ನಂತರ, ಅದರಲ್ಲೂ ಗ್ರಾಫಿಕ್ಸ್, ವಿಶೇಷ ಪರಿಣಾಮ ಇತ್ಯಾದಿಗಳ ಹೆಸರಿನಲ್ಲಿ ಸಾಕಷ್ಟು ವೆಚ್ಚ ಮಾಡಬೇಕಾದ ಪರಿಸ್ಥಿತಿ ಬಂತು. ಅದರಲ್ಲಿ ನಿಜವೆಚ್ಚ ಎಷ್ಟು, ಮಧ್ಯವರ್ತಿಗಳ ಪಾಲೆಷ್ಟು ಎಂದು ಲೆಕ್ಕ ಹಾಕುವುದು ಕಷ್ಟವಾದ್ದರಿಂದ ಸಾಕಷ್ಟು ಮಂದಿ ನಿರ್ಮಾಪಕರು, ಅದರಲ್ಲೂ ಹೊಸಬರು ಮೋಸ ಹೋದ ಪ್ರಸಂಗಗಳೇ ಹೆಚ್ಚು.

ಸಂಗೀತ ಸಂಯೋಜಕ ಅರ್ಜುನ್ ಜನ್ಯ ನಿರ್ದೇಶನದ ಮೊದಲ ಚಿತ್ರ ‘೪೫’. ಆ ಚಿತ್ರಕ್ಕೆ ಬಹುತೇಕ ಸಿಜಿ. ಕೆಲಸ ಆಗಬೇಕಿತ್ತು. ನಿರ್ಮಾಪಕರು ಕೋಟಿಗಳನ್ನು ಅದಕ್ಕಾಗಿ ವ್ಯಯಿಸಿದರು. ಆದರೆ ಅವರಿಗಾಗಲೀ, ನಿರ್ದೇಶಕರಿಗಾಗಲೀ ಆ ಕೆಲಸಗಳು ಸಮಾಧಾನ ತರಲಿಲ್ಲ. ತಾವು ಏನು ನಿರೀಕ್ಷಿಸಿದ್ದೆವೋ, ಆ ಮಟ್ಟಕ್ಕೆ ಸಿಜಿ ಮತ್ತು ವಿಎಫ್‌ಎಕ್ಸ್ ಇರಲಿಲ್ಲ ಎನ್ನುವುದು ನಿರ್ಮಾಪಕ, ನಿರ್ದೇಶಕರ ಆರೋಪ.

ಪೀಪಲ್ ಮೀಡಿಯಾ ಫ್ಯಾಕ್ಟರಿ ಚಿತ್ರಗಳನ್ನು ನಿರ್ಮಿಸುತ್ತಿದೆ. ಆಂಧ್ರ ಪ್ರದೇಶ ಮೂಲದ ಈ ಸಂಸ್ಥೆ ಈಗಾಗಲೇ ಅದು ಐವತ್ತರ ಗಡಿ ದಾಟಿದೆ. ಕನ್ನಡದಲ್ಲಿ ಗಣೇಶ್ ಅಭಿನಯದ ‘ಪಿನಾಕ’ ಚಿತ್ರವನ್ನು ಅದು ನಿರ್ಮಿಸುತ್ತಿದೆ. ಆ ಸಂಸ್ಥೆಯದೇ ಆದ ಸಿಜಿ, ವಿಎಫ್‌ಎಕ್ಸ್‌ಗಳನ್ನು ನಿರ್ವಹಿಸುವ ಸ್ಟುಡಿಯೋ ಹೈದರಾಬಾದಿನಲ್ಲಿ ಇದೆ. ಅಲ್ಲಿ ನೂರಾರು ಮಂದಿ ಕೆಲಸ ಮಾಡುತ್ತಿದ್ದಾರಂತೆ. ಆ ಸಂಸ್ಥೆಯ ಮಾಲೀಕರ ಐಟಿ ಸಂಸ್ಥೆಯೊಂದು ಅಮೆರಿಕದಲ್ಲಿದ್ದು, ಅಲ್ಲಿ ಸಾವಿರಾರು ಮಂದಿ ಕೆಲಸ ಮಾಡುತ್ತಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಮಾತ್ರವಲ್ಲ, ಹೈದರಾಬಾದಿನ ಅನ್ನಪೂರ್ಣ ಮತ್ತಿತರ ಸ್ಟುಡಿಯೋಗಳಲ್ಲಿ ಕೂಡ ಈ ಸಿಜಿ, ವಿಎಫ್‌ಎಕ್ಸ್‌ಗಳನ್ನು ಮಾಡಿಕೊಡುವ ವ್ಯವಸ್ಥೆ ಇದೆ. ಅದೇ ರೀತಿ ಕೊಚ್ಚಿನ್‌ನಲ್ಲಿ ಕೂಡ ಇದೆ. ಅಲ್ಲಿ ಸಮರ್ಥ ತಂತ್ರಜ್ಞರಿದ್ದಾರೆ ಎನ್ನುವುದು ಅಲ್ಲಿ ಕೆಲಸ ಮಾಡಿದ ಅನುಭವಿಗಳ ಮಾತು. ‘ಕಾಂತಾರ’ ಚಿತ್ರದ ಸಾಕಷ್ಟು ಕೆಲಸ ಅಲ್ಲಿ ನಡೆದಿತ್ತು.

ಸಿಲಿಕಾನ್ ಸಿಟಿ ಎಂದೇ ಹೆಸರಾದ ಬೆಂಗಳೂರು, ಡಿಜಿಟಲ್ ಸಿನಿಮಾದ ನಂತರ ಅದಕ್ಕೆ ಪೂರಕ ಸೌಲಭ್ಯ ಒದಗಿಸಲು ಮುಂಚೂಣಿಯಲ್ಲಿ ಇರಬಹುದಿತ್ತು, ಇರಬೇಕಿತ್ತು. ಈಗಾಗಲೇ ಬೇರೆಬೇರೆ ಸಂದರ್ಭಗಳಲ್ಲಿ ಪ್ರಸ್ತಾಪಿಸಿದಂತೆ, ಸಿದೇಶದಲ್ಲೇ ಎವಿಜಿಸಿ ನೀತಿ (ಎನಿಮೇಶನ್, ವರ್ಚುವಲ್ ಎಫೆಕ್ಟ್ , ಗೇಮಿಂಗ್, ಕಾಮಿಕ್ಸ್) ತಂದ ಮೊದಲ ರಾಜ್ಯ ಕರ್ನಾಟಕ. ಇದೀಗ ಮೂರನೇ ನೀತಿ ಬಂದಿದೆ. ಎವಿಜಿಸಿ ಜೊತೆಗೆ ಎಕ್ಸ್‌ಆರ್ (ಎಕ್ಸ್‌ಟೆಂಡೆಂಡ್ ರಿಯಾಲಿಟಿ) ಸೇರಿದೆ. ಇವುಗಳ ಕುರಿತ ಸಮಗ್ರ ಮಾಹಿತಿ ಚಿತ್ರೋದ್ಯಮದ ಮಂದಿಗೆ ಇರುವ ಸಾಧ್ಯತೆ ಕಡಿಮೆ.

ಕನ್ನಡ ಸಿನಿಮಂದಿ ಮನರಂಜನೋದ್ಯಮ ಟಿಸಿಲೊಡೆದ ಪರಿಯನ್ನು ಗ್ರಹಿಸುವುದರಲ್ಲಿ ಹಿಂದಿದ್ದಾರೆ. ಕಿರುಚಿತ್ರಗಳು, ವೆಬ್ ಸರಣಿಗಳು, ಸಾಕ್ಷ್ಯಚಿತ್ರಗಳೇ ಮುಂತಾದವುಗಳತ್ತ ಅವರ ಗಮನ ಕಡಿಮೆ. ರಂಗಭೂಮಿ, ಕಿರುತೆರೆಗಳ ಬಗೆಗೂ ಅವರ ಆಸಕ್ತಿ ಕಡಿಮೆ. ನೆರೆಯ ಆಂಧ್ರಪ್ರದೇಶದಲ್ಲಿ ಚಲನಚಿತ್ರ, ಟಿವಿ ಮತ್ತು ರಂಗಭೂಮಿ ಅಭಿವೃದ್ಧಿನಿಗಮ ಇದೆ. ಅಂತಹದೊಂದು ಕಲ್ಪನೆ ಇಲ್ಲಿ ಸಾಧ್ಯವಾಗುವುದು ಕಷ್ಟ. ದೇಶದಲ್ಲೇ ಚಲನಚಿತ್ರೋದ್ಯಮ ಅಭಿವೃದ್ಧಿ ನಿಗಮ ಸ್ಥಾಪಿಸಿದ ಮೊದಲ ರಾಜ್ಯ ಕರ್ನಾಟಕ ಆಗಿತ್ತು. ಆದರೆ ಅದನ್ನು ನಷ್ಟದ ನಿಗಮದ ಸಾಲಿಗೆ ಸೇರಿಸಿ ಮುಚ್ಚಲಾಯಿತು. ವಿಶೇಷ ಎಂದರೆ, ದೇಶದ ಎಲ್ಲ ರಾಜ್ಯಗಳಲ್ಲೂ ಈಗ ಚಲನಚಿತ್ರ ಅಭಿವೃದ್ಧಿ ನಿಗಮಗಳಿವೆ, ಕರ್ನಾಟಕದ ಹೊರತಾಗಿ.

ಚಿತ್ರ ನಿರ್ಮಾಣಕ್ಕೆ ಬೇಕಾದ ಮೂಲಸೌಲಭ್ಯಗಳನ್ನು ಒದಗಿಸುವ ಕೆಲಸ ಈಗ ಆಗಬೇಕಾಗಿದೆ. ಸರ್ಕಾರ ಮಾಡಲಿ ಎನ್ನುವ ಮನೋಭಾವನೆಯಿಂದ ಹೊರಬಂದು, ಸರ್ಕಾರದ ಜೊತೆ ಕೈಜೋಡಿಸಿಕೊಂಡು ಈ ಕೆಲಸ ಮಾಡಲು ಸಾಧ್ಯ ಎನ್ನುವುದನ್ನು ನೆರೆಯ ರಾಜ್ಯಗಳು ತೋರಿಸಿವೆ. ಆದರೆ ಇಲ್ಲಿ ಪ್ರತಿ ವಿಷಯಕ್ಕೂ ಸರ್ಕಾರದ ಮುಖ ನೋಡುವ ಪರಿಸ್ಥಿತಿಯಿಂದ ಉದ್ಯಮ ಹೊರಬಂದಿಲ್ಲ.

ಮೈಸೂರಿನಲ್ಲಿ ಚಿತ್ರನಗರಿಯ ಯೋಜನೆಗೆ ಚಾಲನೆ ಸಿಕ್ಕಿದೆ. ಅಲ್ಲಿನ ಜಾಗ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸುಪರ್ದಿಗೆ ಬಂದಿದೆ, ಜಾಗದ ಸುತ್ತ ಬೇಲಿ ಹಾಕುವ ಕೆಲಸ ನಡೆದಿದೆ ಎನ್ನುವ ಮಾತು ಕೇಳಿ ಬಹಳ ದಿನಗಳಾದವು. ಅಲ್ಲಿ ಡಿಜಿಟಲ್ ದಿನಗಳಿಗೆ ಪೂರಕವಾಗುವ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಆಗಬೇಕು. ಅನಿಮೇಶನ್, ಗ್ರಾಫಿಕ್ಸ್ ಪಾರ್ಕ್ ಗಳು, ವಿಎಫ್‌ಎಕ್ಸ್ ಸ್ಟುಡಿಯೋಗಳು, ಮತ್ತಿತರ ಡಿಜಿಟಲ್ ವ್ಯವಸ್ಥೆ ಅಲ್ಲಿ ಆಗಬೇಕು. ಸರ್ಕಾರ ಮತ್ತು ಸಾರ್ವಜನಿಕರ ಸಹಯೋಗದಲ್ಲಿ ಇಂತಹದೊಂದು ಕೆಲಸ ಅಸಾಧ್ಯವೇನೂ ಅಲ್ಲ. ಉಳಿದ ರಾಜ್ಯಗಳು ತಮ್ಮಲ್ಲಿಗೆ ಬಂದು ಚಿತ್ರೀಕರಣ ಮಾಡಲು ಚಿತ್ರೋದ್ಯಮಿಗಳನ್ನು ಸ್ವಾಗತಿಸುತ್ತವೆ.

ವೇಲ್ಸ್ ನಗರದ ಮೇಯರ್, ತಮ್ಮಲ್ಲಿ ಬಂದು ಚಿತ್ರೀಕರಣ ಮಾಡಿದರೆ ಸಾಕಷ್ಟು ರಿಯಾಯಿತಿ ನೀಡುವ ವಿಷಯವನ್ನು ಬೆಂಗಳೂರಿನಲ್ಲಿ ಬಂದು ಸಕ್ರಿಯ ನಿರ್ಮಾಪಕರಿಗೆ ಹೇಳಿದರಂತೆ. ನಾನು ನನ್ನ ‘ಆಕೆ’ ಚಿತ್ರವನ್ನು ಯುಕೆಯಲ್ಲೇ ಮಾಡಿದೆ ಎಂದು ತಮ್ಮ ನೆನಪನ್ನು ಹೇಳುತ್ತಾರೆ ಚೈತನ್ಯ. ಬೆಂಗಳೂರಿಗೆ ಬನ್ನಿ ಎನ್ನುವ ಕರೆ ನೀಡುವುದು ಯಾವಾಗ ಯಾರು?

 

Tags:
error: Content is protected !!