ತಿ.ನರಸೀಪುರ : ಮೈಕ್ರೋ ಫೈನಾನ್ಸ್ ಸಿಬ್ಬಂದಿಯನ್ನು ಅಡ್ಡಗಟ್ಟಿರುವ ಏಳು ಮಂದಿ ದರೋಡೆಕೋರರ ತಂಡ ಮಚ್ಚು ತೋರಿಸಿ ಅವರ ಬಳಿ ಇದ್ದ ಸಾಲ ವಸೂಲಾತಿ 25 ಸಾವಿರ ರೂ. ದೋಚಿರುವ ಘಟನೆ ಸೋಮವಾರ ಸಂಜೆ ಪಟ್ಟಣದ ಹೊರವಲಯ ಶ್ರೀ ನರಸಿಂಹಸ್ವಾಮಿ ಕಂತೆಕಟ್ಟೆ ಕ್ಷೇತ್ರದ ಬಳಿ ಹುಣಸೂರು ರಸ್ತೆಯಲ್ಲಿ ನಡೆದಿದೆ.
ಚಾಮರಾಜನಗರ ತಾಲ್ಲೂಕಿನ ಬಿಸಲವಾಡಿ ಗ್ರಾಮದ ಮಹೇಶ್ ಅವರು ಬಣ್ಣಾರಿ ಅಮ್ಮನ್ ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಸಹೋದ್ಯೋಗಿ ಪ್ರೇಮ್ ಕುಮಾರ್ ಅವರೊಂದಿಗೆ ಫೈನಾನ್ಸ್ ಸಂಸ್ಥೆಯ ಮ್ಯಾನೇಜರ್ ಸೂಚನೆಯಂತೆ ವಿವಿಧೆಡೆ ಸಾಲದ ಹಣವನ್ನು ವಸೂಲಿ ಮಾಡಿಕೊಂಡು ಹುಣಸೂರು ಗ್ರಾಮದ ಕಡೆಗೆ ಬೈಕ್‌ನಲ್ಲಿ ಇಬ್ಬರೂ ಹೋಗುತ್ತಿದ್ದಾಗ ಸ್ಕೂಟಿ ಹಾಗೂ ಕಾರಿನಲ್ಲಿ ಬಂದು ಅಡ್ಡಗಟ್ಟಿರುವ ಏಳು ಮಂದಿ ದರೋಡೆಕೋರರ ತಂಡ ಹಣವನ್ನು ದೋಚಿದ್ದಾರೆ.
ಮಹೇಶ್ ಮತ್ತು ಪ್ರೇಮ್ ಕುಮಾರ್ ಇಬ್ಬರೂ ಬೆಳಿಗ್ಗೆ ಕಂಪೆನಿಯ ಬೈಕ್‌ನಲ್ಲಿ ಆಲನಹಳ್ಳಿ, ನಂತರ ವರುಣ, ಸೋಸಲೆ, ಪೂರಿಗಾಲಿ, ಸರಗೂರು ಹ್ಯಾಂಡ್ ಪೋಸ್ಟ್ ಹಾಗೂ ತಲಕಾಡು ಗ್ರಾಮಗಳಲ್ಲಿ ಅಂಗಡಿ ಮತ್ತು ಸಾರ್ವಜನಿಕರಿಂದ ಒಟ್ಟು 25 ಸಾವಿರ ರೂ.ಗಳನ್ನು ಸಾಲಗಾರರಿಂದ ವಸೂಲಿ ಮಾಡಿಕೊಂಡು ತಲಕಾಡಿನಿಂದ ತಿ.ನರಸೀಪುರಕ್ಕೆ ಬರುತ್ತಿದ್ದು, ಬಳಿಕ ಇಬ್ಬರೂ ತಿ.ನರಸೀಪುರದಿಂದ ಹುಣಸೂರಿಗೆ ಹೋಗುತ್ತಿದ್ದಾಗ ಬೈಕ್ ಅನ್ನು ಮಾರ್ಗ ಮಧ್ಯೆ ಶ್ರೀ ನರಸಿಂಹಸ್ವಾಮಿ ಕಂತೆಕಟ್ಟೆ ಕ್ಷೇತ್ರದ ಬಳಿ ನರಸೀಪುರ ಕಡೆಯಿಂದ ಬಿಳಿಯ ಬಣ್ಣದ ಸ್ಕೂಟಿಯಲ್ಲಿ ಬಂದ ಇಬ್ಬರು ಹಾಗೂ ಒಂದು ಕೆಂಪು ಬಣ್ಣದ ಇನ್ನೋವಾ ಕಾರಿನಲ್ಲಿದ್ದ ಐವರು ಅಡ್ಡಹಾಕಿ ನಿಲ್ಲಿಸಿ ಚಿಕ್ಕ ಮಚ್ಚನ್ನು ತೋರಿಸಿ, ಬೆದರಿಸಿ 21 ಸಾವಿರ ರೂ. ಸಾಲ ವಸೂಲಾತಿ ಹಣ ಹಾಗೂ ಪ್ರೇಮ್ ಕುಮಾರ್ ಬಳಿಯಿದ್ದ 4 ಸಾವಿರ ರೂ.ಗಳನ್ನು ಕಿತ್ತುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಪೊಲೀಸ್ ಇನ್‌ಸ್ಪೆಕ್ಟರ್ ಧನಂಜಯ ಅವರು ಘಟನಾ ಸ್ಥಳದ ಮಹಜರು ನಡೆಸಿ ದರೋಡೆಕೋರರ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.





