ಮೈಸೂರು: ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ಮರುಪಾವತಿ ವೇಳೆ ಚಿತ್ರಹಿಂಸೆ ನೀಡಬಾರದು ಎಂದು ಸಿಎಂ ಸಿದ್ದರಾಮಯ್ಯ ಆದೇಶ ನೀಡಿದ್ದರೂ, ಡೋಂಟ್‌ಕೇರ್ ಎನ್ನದ ಫೈನಾನ್ಸ್‌ಗಳು ನಾಗರಿಕ ಸಮಾಜ ತಲೆ ತಗ್ಗಿಸುವ ರೀತಿ ನಡೆದುಕೊಂಡಿವೆ.
ಟಿ.ನರಸೀಪುರ ತಾಲ್ಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೇವಲ 1280 ರೂಪಾಯಿ ಲೋನ್ ಕಟ್ಟಿಲ್ಲ ಎಂದು 7 ವರ್ಷದ ಹೆಣ್ಣು ಮಗುವನ್ನು ನಿಮ್ಮ ತಾಯಿ ಎಲ್ಲಿ ತೋರಿಸು ಎಂದು ಹಿಂಸೆ ನೀಡಿರುವ ಆರೋಪ ಕೇಳಿ ಬಂದಿದೆ.
ಜಾಲಹಳ್ಳಿ ಗ್ರಾಮದ ನವೀನ್ ಹಾಗೂ ಪ್ರಮೀಳಾ ದಂಪತಿ ಜೀವನ ನಡೆಸಲು ಬಜಾಜ್ ಮೈಕ್ರೋ ಫೈನಾನ್ಸ್‌ನಿಂದ 30 ಸಾವಿರ ಸಾಲ ಪಡೆದು, 13 ತಿಂಗಳು ಲೋನ್ ಕಟ್ಟಿದ್ದರು. ಈ ತಿಂಗಳು 4 ದಿನ ತಡವಾಗಿದ್ದಕ್ಕೆ ಫೈನಾನ್ಸ್ ಸಿಬ್ಬಂದಿ ಚಿತ್ರ ಹಿಂಸೆ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಮನೆಗೆ ಬಂದು ನವೀನ್ ತಾಯಿಗೆ ಬೈದು ಹಣ ಕಟ್ಟುವಂತೆ ಒತ್ತಾಯಿಸಿದ್ದಾರೆ. ಬಳಿಕ ಪಕ್ಕದ ಊರಿನಲ್ಲಿದ್ದ ಮಗುವಿನ ಬಳಿ ತೆರಳಿ ನಿಮ್ಮ ಅಮ್ಮ ಎಲ್ಲಿ ತೋರಿಸಿ ಬಾ ಎಂದು ಫೈನಾನ್ಸ್ ಸಿಬ್ಬಂದಿಗಳು ಕರೆದೊಯ್ದಿದ್ದಾರೆ ಎನ್ನಲಾಗಿದೆ.
ತಾಳಿ ಅಡವಿಟ್ಟು ದುಡ್ಡು ಕೊಡ್ತೀವಿ ಸಂಜೆ ಬನ್ನಿ ಎಂದರು ಬಿಡದೇ ಈಗಲೇ ಹಣ ಬೇಕು ಎಂದು ಪೀಡಿಸಿದ್ದಾರೆ. 4 ದಿನಗಳ ಹಿಂದೆ ನಡೆದಿರುವ ಘಟನೆ ಈಗ ಮೈಸೂರು ಮಕ್ಕಳ ಸಮಿತಿ ಕಾರ್ಯಾಚರಣೆ ವೇಳೆ ಬೆಳಕಿಗೆ ಬಂದಿದೆ.



