ಮೈಸೂರು: ತನ್ನ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯನ್ನು ಲಾಡ್ಜ್‌ಗೆ ಕರೆದೊಯ್ದು ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲ್ಲೂಕಿನ ಭೇರ್ಯ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹುಣಸೂರು ತಾಲ್ಲೂಕಿನ ಗೆರಸನಹಳ್ಳಿ ಗ್ರಾಮದ ರಕ್ಷಿತಾ ಎಂಬಾಕೆಯೇ ಕೊಲೆಯಾದ ಮಹಿಳೆಯಾಗಿದ್ದಾಳೆ. ಪಿರಿಯಾಪಟ್ಟಣದ ಬಿಳೆಕೆರೆ ಗ್ರಾಮದ ಸಿದ್ದರಾಜು ಎಂಬಾತನೇ ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ.
ಕೇರಳ ಮೂಲದ ವ್ಯಕ್ತಿಯನ್ನು ವಿವಾಹವಾಗಿದ್ದ ರಕ್ಷಿತಾ ಸಿದ್ದರಾಜು ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಹೀಗಿರುವಾಗಲೇ ಸಿದ್ದರಾಜು ಕಪ್ಪಡಿ ಕ್ಷೇತ್ರಕ್ಕೆ ಹೋಗೋಣ ಎಂದು ರಕ್ಷಿತಾಳನ್ನು ಕರೆದು ಲಾಡ್ಜ್‌ಗೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ.
ಕೊಲೆಯನ್ನು ಮುಚ್ಚಿಹಾಕಲು ಮೊಬೈಲ್ ಬ್ಲಾಸ್ಟ್ ಎಂದು ಕೂಗಾಡಿದ್ದ. ಈ ವೇಳೆ ಅಲ್ಲಿದ್ದ ಹೋಟೆಲ್ ಸಿಬ್ಬಂದಿ ಸ್ಥಳದಲ್ಲಿ ಮೊಬೈಲ್ ಹುಡುಕಿದರೂ ಸಿಗದ ಕಾರಣ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ನಡೆಸಿದ್ದು, ಆರೋಪಿ ಸಿದ್ದರಾಜು ಅಸಲಿ ವಿಷಯವನ್ನು ಪೊಲೀಸರ ಮುಂದೆ ಬಾಯ್ದಿಟ್ಟಿದ್ದಾನೆ. ಈ ಸಂಬಂಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





