Mysore
22
overcast clouds
Light
Dark

ಮನಸ್ವಿನಿ, ಮೈತ್ರಿ ಯೋಜನೆ ರೂವಾರಿ ಶ್ರೀನಿವಾಸಪ್ರಸಾದ್ : ಡಾ.ರಂಗಸ್ವಾಮಿ

ಮೈಸೂರು: ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ೪೦ರಿಂದ ೬೫ ವರ್ಷದ ಅವಿವಾಹಿತೆ ಮಹಿಳೆಯರಿಗೆ, ಮಂಗಳಮುಖಿಯರಿಗೆ ಜೀವನ ಭದ್ರತೆ ಒದಗಿಸಲು ಕ್ರಮವಾಗಿ ಮನಸ್ವಿನಿ, ಮೈತ್ರಿ ಯೋಜನೆ ರೂಪಿಸಲು ವಿ.ಶ್ರೀನಿವಾಸಪ್ರಸಾದ್ ಅವರೇ ಕಾರಣ ಎಂದು ಮೈಸೂರು ವಿವಿ ಅಭಿವೃದ್ಧಿ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ.ರಂಗಸ್ವಾಮಿ ಹೇಳಿದರು.

ಮೈಸೂರು ಅಥ್ಲೆಟಿಕ್ಸ್ ಕ್ಲಬ್, ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಮೈಸೂರು ವಿವಿ ಓವೆಲ್ ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

೫ ದಶಕಗಳ ಸುದೀರ್ಘ ರಾಜಕಾರಣ ಅನುಭವ ಶ್ರೀನಿವಾಸಪ್ರಸಾದ್ ಅವರಿಗಿತ್ತು. ವಿಧವೆಯರಿಗೆ, ವೃದ್ಧೆಯರಿಗೆ ಮಾಸಾಶನ ನೀಡಲಾಗುತ್ತದೆ. ಆದರೆ, ವಿವಾಹ ಆಗದೇ ಇರುವ ಮಹಿಳೆಯರಿಗೆ ಏನು ಮಾಡುವುದು?. ಅವರಿಗೂ ಜೀವನ ಭದ್ರತೆ ಕಲ್ಪಿಸಬೇಕಲ್ಲ ಎಂದು ಮಾಸಿಕ ೨ ಸಾವಿರ ರೂ. ಪಿಂಚಣಿ ನೀಡುವ ಯೋಜನೆ ರೂಪಿಸಿದರು. ರಾಜ್ಯದಲ್ಲಿ ಸುಮಾರು ೧.೩೪ ಲಕ್ಷ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆದು ಜೀವನ ಸಾಗಿಸುತ್ತಿದ್ದಾರೆ ಎಂದರು.

ಮೊಟ್ಟ ಮೊದಲನೆಯದಾಗಿ ಈ ಯೋಜನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ರಾಚಪ್ಪಾಜಿ ನಗರದಲ್ಲಿ ಈ ಯೋಜನೆ ಜಾರಿಯಾಯಿತು. ಇದೀಗ ಪಶ್ಚಿಮ ಬಂಗಾಳ ಸೇರಿದಂತೆ ಬೇರೆ ಬೇರೆ ರಾಜ್ಯಗಳೂ ಈ ಯೋಜನೆ ಜಾರಿ ಮಾಡುತ್ತಿವೆ ಎಂದರು.

ಶ್ರೀನಿವಾಸಪ್ರಸಾದ್ ಅವರ ಪುತ್ರಿ ಪ್ರತಿಮಾ ದೇವರಾಜ್ ಮಾತನಾಡಿ, ಆನಾರೋಗ್ಯದಿಂದಾಗಿ ಸುಮಾರು ೨೪ ವರ್ಷಗಳ ಹಿಂದೆಯೇ ಅಪ್ಪನನ್ನು ಏರ್ ಲಿಫ್ಟ್ ಮಾಡಲಾಗಿತ್ತು. ಆದರೆ ಅವರ ಮನೋಸ್ಥೆರ್ಯ ಚೆನ್ನಾಗಿದ್ದರಿಂದ ಈವರೆಗೆ ಬದುಕುಳಿದು, ಜನಸೇವೆ ಮಾಡಿದರು. ಈ ಬಾರಿಯೂ ಅವರು ಆಸ್ಪತ್ರೆಯಿಂದ ಮನೆಗೆ ಮರಳುತ್ತಾರೆ ಎಂದುಕೊಂಡಿದ್ದೆವು. ಆದರೆ, ಆ ರೀತಿಯಾಗಲಿಲ್ಲ ಎಂದು ಭಾವುಕರಾದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ೫ ದಶಕಗಳ ರಾಜಕಾರಣದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಆದರ್ಶ ಪಾಲಿಸಿ, ಸಮಸಮಾಜ, ಸಾಮರಸ್ಯ, ಸಹಬಾಳ್ವೆಯ ವಾತಾವರಣ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು ಸೇರಿದಂತೆ ಎಲ್ಲ ಶೋಷಿತರ ಪರ ಧ್ವನಿಯಾಗಿದ್ದರು. ಜೊತೆಗೆ ಎಲ್ಲಾ ವರ್ಗಗಳ ಜನಪ್ರೀತಿಗೆ ಪಾತ್ರರಾಗಿದ್ದರು ಎಂದರು.

ಎಂ.ಯೋಗೇಂದ್ರ ಮಾತನಾಡಿ, ಸ್ವಾಭಿಮಾನಿ, ಶುದ್ಧ ಹಸ್ತದ ರಾಜಕಾರಣಿಯಾಗಿದ್ದ ಶ್ರೀನಿವಾಸಪ್ರಸಾದ್ ಅವರು ಸ್ವತಃ ಕ್ರೀಡಾಪಟು ಹಾಗೂ ಕ್ರೀಡಾಪ್ರೇಮಿಯಾಗಿದ್ದಾರೆ. ನನ್ನಂಥ ಕ್ರೀಡಾಪಟು ಈ ಮಟ್ಟಕ್ಕೆ ಬೆಳೆಸಲು ಶ್ರೀನಿವಾಸಪ್ರಸಾದ್ ಅವರ ಪ್ರೋತ್ಸಾಹವೇ ಕಾರಣ ಎಂದರು.

ಪಿ.ಜಿ.ಸತ್ಯನಾರಾಯಣ್ ಮಾತನಾಡಿ, ಶ್ರೀನಿವಾಸಪ್ರಸಾದ್ ಯಾವಾಗಲೂ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದ್ದರು ಎಂದು ಸ್ಮರಿಸಿದರು. ಧೀರಜ್ ಪ್ರಸಾದ್, ಪಿ.ಜಿ.ಚಂದ್ರಶೇಖರ್, ಸಿ.ಕೆ.ಮರುಳೀಧರ್, ಮಹದೇವಯ್ಯ, ಜಿ.ಆರ್.ಪ್ರಭಾಕರ್, ಕೆ.ಎನ್.ಸೋಮಶೇಖರ್, ಟಿ.ಎಸ್.ರವಿಕುಮಾರ್, ಮಹದೇವರಾವ್, ಎಚ್.ಆರ್.ರಾಮಸ್ವಾಮಿ, ಪದ್ಮನಾಭ, ಕೆ.ಟಿ.ಬಲರಾಮೇಗೌಡ, ಅಭಿಷೇಕ್, ಎನ್.ಪ್ರಸಾದ್, ರೇಖಾ, ಸೇರಿದಂತ ಅಥ್ಲೆಟ್ಗಳು, ಕ್ರೀಡಾಭಿಮಾನಿಗಳು ಹಾಜರಿದ್ದರು.