Mysore
22
overcast clouds
Light
Dark

ಮಾನಕ್ಕಂಜಿ ವಿಷ ಸೇವಿಸಿದ ಪ್ರಕರಣ: ಕೆ.ಆರ್.ನಗರ ಪೊಲೀಸ್‌ ಅಧಿಕಾರಿಗಳ ಅಮಾನತು

ಕೆ.ಆರ್.ನಗರ/ಚಾ.ನಗರ: ಕೆ.ಆರ್.ನಗರ ತಾಲ್ಲೂಕಿನ ಚಂದಗಾಲು ಗ್ರಾಮದ ಒಂದೇ ಕುಟುಂದ ನಾಲ್ವರು ಮಾನಕ್ಕಂಜಿ ವಿಷ ಸೇವಿಸಿದ ಪ್ರಕರಣದಲ್ಲಿ ಸಂತ್ರಸ್ತೆ ಷೋಷಕರು ನೀಡಿದ ದೂರು ದಾಖಲಿಸಿಕೊಳ್ಳದ ಕೆ.ಆರ್.ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಪಿ.ಪಿ.ಸಂತೋಷ್, ಸಹಾಯಕ ಸಬ್ ಇನ್‌ಸ್ಪೆಕ್ಟರ್ ಗಿರೀಶ್, ಮುಖ್ಯಪೇದೆ ರಾಘವೇಂದ್ರ ಅವರನ್ನು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ ಅಮಾನತ್ತು ಮಾಡಿದ್ದಾರೆ.

ಅಪ್ರಾಪ್ತ ಸಂತ್ರಸ್ತೆ ನೀಡಿದ ದೂರನ್ನು ಎಸ್.ಸಿ., ಎಸ್.ಟಿ. ದೌರ್ಜನ್ಯ ತಡೆ ಕಾಯ್ದೆ, ಪೋಕ್ಸೋ ಕಾಯ್ದೆ, ಹಾಗೂ ಐಪಿಸಿ ೩೭೦ ಸೆಕ್ಷನ್‌ನಡಿ ದಾಖಲು ಮಾಡಿಕೊಳ್ಳದೇ ಪೊಲೀಸರು ನಿರ್ಲಕ್ಷ್ಯ ವಹಿಸಿರುವ ಬಗ್ಗೆ ತನಿಖೆ ಮೂಲಕ ವರದಿ ಪಡೆದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ ಅವರು ಈ ಅಮಾನತು ಆದೇಶ ಹೊರಡಿಸಿದ್ದಾರೆ.

ಕೆ.ಆರ್.ನಗರ ತಾಲ್ಲೂಕಿನ ಗ್ರಾಮವೊಂದರ ಲೋಕೇಶ್ ಎಂಬಾತ ಪಕ್ಕದ ಗ್ರಾಮದ ಬಾಲಕಿಯನ್ನು ಪ್ರೀತಿಸುವ ನಾಟಕವಾಡಿ ಆಕೆಯ ಖಾಸಗಿ ಫೋಟೋ ಹಾಗೂ ವಿಡಿಯೋ ಮಾಡಿ ವೈರಲ್ ಮಾಡುವುದಾಗಿ ಬ್ಲಾಕ್‌ಮೇಲ್ ಮಾಡುತ್ತಿದ್ದ ಸಂಬಂಧ ಸಂತ್ರಸ್ತೆಯ ಪೋಷಕರು ಕೆ.ಆರ್.ನಗರ ಠಾಣೆಗೆ ದೂರು ನೀಡಿಯೂ ತಮಗೆ ನ್ಯಾಯ ಸಿಗುವ ಭರವಸೆ ಇಲ್ಲದೆ ಇಡೀ ಕುಟುಂಬದವರಲ್ಲೆರೂ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿ ಮಹದೇಶ್ವರ ಬೆಟ್ಟಕ್ಕೆ
ತೆರಳಿ ದೇವರ ದರ್ಶನ ಪಡೆದು ವಾಪಸ್ ಬರುವಾಗ ಶುಕ್ರವಾರ(ಜೂ.8) ಬೆಳಿಗ್ಗೆ ತಾಳಬೆಟ್ಟದಲ್ಲಿ ಸಂತ್ರಸ್ತ ಬಾಲಕಿ, ಆಕೆಯ ತಾಯಿ, ತಾತ, ಅಜ್ಜಿ ವಿಷ ಸೇವಿಸಿದ್ದರು. ಘಟನೆಯಲ್ಲಿ 65 ವರ್ಷದ ತಾತ ಸ್ಥಳದಲ್ಲಿ ಸಾವನ್ನಪ್ಪಿದ್ದರು.

ಚಾಮರಾಜನಗರದ ಹೊರವಲಯದಲ್ಲಿರುವ ಸಿಮ್ಸ್ ಆಸ್ಪತ್ರೆಯಲ್ಲಿ ಸಂತ್ರಸ್ತೆ, ಆಕೆಯ ತಾಯಿ ಹಾಗೂ ಅಜ್ಜಿಗೆ ಚಿಕಿತ್ಸೆ ನೀಡಲಾಗುತ್ತಿದ್ದು,45 ವರ್ಷ ವಯಸ್ಸಿನ ಸಂತ್ರಸ್ತೆಯ ತಾಯಿ ಸ್ಥಿತಿ ಗಂಭೀರವಾಗಿದೆ. ಇನ್ನಿಬ್ಬರು ಚೇತರಿಸಿಕೊಳ್ಳುತ್ತಿದ್ದಾರೆ.

ಶಾಸಕ ಡಿ.ರವಿಶಂಕರ್ ಅವರು ಸಂತ್ರಸ್ತೆಯ ಅಜ್ಜನ ಅಂತ್ಯಕ್ರಿಯೆಯಲ್ಲಿ ಕುಟುಂಬದವರಿಗೆ ಸಾಂತ್ವನ ಹೇಳಿ, ಕುಂಟುಂಬಕ್ಕೆ ಸಂಪೂರ್ಣ ಚಿಕಿತ್ಸಾ ವೆಚ್ಚ ಹಾಗೂ ನೊಂದ ಕುಟುಂಬಕ್ಕೆ ವೈಯಕ್ತಿಕವಾಗಿ 2 ಲಕ್ಷ ರೂ. ಪರಿಹಾರ ನೀಡಿದ್ದೇನೆ ಎಂದು ತಿಳಿಸಿದರು.