ತಿ.ನರಸೀಪುರ : ತಾಲ್ಲೂಕಿನ ಬೂದಹಳ್ಳಿ ಗ್ರಾಮದಲ್ಲಿ ಗುರುವಾರ 6 ವರ್ಷದ ಗಂಡು ಚಿರತೆಯೊಂದು ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ ಸಿಕ್ಕಿ ಬಿದ್ದಿದೆ.
ಬುಧವಾರ ಬೂದಹಳ್ಳಿ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡ ಬಗ್ಗೆ ಗ್ರಾಮಸ್ಥರು ಹಾಗೂ ರೈತರಿಂದ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಪ್ರಾದೇಶಿಕ ಅರಣ್ಯಾಧಿಕಾರಿಗಳು ಬುಧವಾರ ರೈತ ಅಪ್ರೋಜ್ ಎಂಬವರ ಜಮೀನಿನಲ್ಲಿ ಬೋನು ಇಟ್ಟಿದ್ದರು. ಬೋನು ಇಟ್ಟ ರಾತ್ರಿಯೇ ಚಿರತೆ ಸೆರೆಯಾಗಿದ್ದು, ಗುರುವಾರ ಮುಂಜಾನೆಯ ನಸುಕಿನಲ್ಲಿ ಚಿರತೆ ಅರಣ್ಯಾಧಿಕಾರಿಗಳು ಇರಿಸಿದ್ದ ಬೋನಿಗೆ ಬಿದ್ದಿರುವುದು ಗೊತ್ತಾಗಿದೆ.
ಕೂಡಲೇ ಆಗಮಿಸಿದ ಅರಣ್ಯಾಧಿಕಾರಿಗಳ ತಂಡ ಸೆರೆ ಸಿಕ್ಕ ಗಂಡು ಚಿರತೆಯನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಒಂದೇ ದಿನದಲ್ಲಿ ಚಿರತೆ ಸಿಕ್ಕಿ ಬಿದ್ದಿರುವುದು ಬೂದಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ಆಶ್ಚರ್ಯ ಹಾಗೂ ಖುಷಿ ಎರಡನ್ನೂ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಅರಣ್ಯ ಅಧಿಕಾರಿ ನಾಗರಾಜು, ಸಿಬ್ಬಂದಿಗಳು ಭೇಟಿ ನೀಡಿದ್ದರು.





