ಮೈಸೂರು : ಕುಡಿಯಲು ಪತ್ನಿ ಹಣ ನೀಡದ್ದಕ್ಕೆ ಜನ್ಮ ನೀಡಿದ 7 ತಿಂಗಳ ಹೆಣ್ಣು ಮಗುವನ್ನೇ ಕೊಲೆಗೈದ ತಂದೆಗೆ ಮೈಸೂರಿನ ಆರನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ನಗರದ ಕನಕಗಿರಿ ನಿವಾಸಿ ನಾಗೇಂದ್ರ ಶಿಕ್ಷೆಗೆ ಗುರಿಯಾದವ. ಈತ ತರಕಾರಿ ವ್ಯಾಪಾರಿಯಾಗಿದ್ದು, ಸಿದ್ದಮ್ಮ ಅವರ ಪುತ್ರಿ ರಮ್ಯ ಅವರನ್ನು ವಿವಾಹವಾಗಿದ್ದ. ಆತನಿಗೆ 7 ತಿಂಗಳ ಹೆಣ್ಣು ಮಗು ಕೂಡ ಇತ್ತು. ಕುಡಿತದ ಚಟಕ್ಕೆ ದಾಸನಾಗಿದ್ದ ನಾಗೇಂದ್ರ, ನಿತ್ಯ ಮದ್ಯ ಸೇವನೆಗೆ ಹಣ ನೀಡುವಂತೆ ಪತ್ನಿಯನ್ನು ಪೀಡಿಸುತ್ತಿದ್ದ.
2022 ಏ. 24 ರಂದು ಪತ್ನಿ ರಮ್ಯ ಅವರನ್ನು ಹಣಕ್ಕಾಗಿ ಪೀಡಿಸಿದ ನಾಗೇಂದ್ರ, ಹಣ ನೀಡದೇ ಇದ್ದರೆ ಮಗುವನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾನೆ. ತಕ್ಷಣ ರಮ್ಯ ಅವರು ಕೂಗಿಕೊಂಡು ಮನೆಯಿಂದ ಹೊರಗೆ ಬಂದಾಗ ಮನೆಯಲ್ಲಿಯೇ ಇದ್ದ ನಾಗೇಂದ್ರ ತೂಕ ಮಾಡುವ ಕಬ್ಬಿಣದ ತಕ್ಕಡಿ ಮತ್ತು ಬಟ್‌ನಿಂದ ಮಗುವನ್ನು ಹೊಡೆದು ಕೊಲೆ ಮಾಡಿದ್ದ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ವಿದ್ಯಾರಣ್ಯಪುರಂ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧಿಶರಾದ ವಿ.ಎಚ್. ದಯಾನಂದ ಅವರು ಆರೋಪ ಸಾಬೀತಾದ ಹಿನ್ನಲೆಯಲ್ಲಿ ನಾಗೇಂದ್ರಗೆ ಜೀವಾವಧಿ ಶಿಕ್ಷೆಯೊಂದಿಗೆ 10 ಸಾವಿರ ರೂ.ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಎಂ. ಕಾಮಾಕ್ಷಿ ವಾದ ಮಂಡಿಸಿದ್ದರು.





