ಮೈಸೂರು : ಸಾಂಸ್ಕೃತಿಕ ನಗರಿ, ಸ್ವಚ್ಚತೆ ನಗರಿ ಮೈಸೂರಿನಲ್ಲಿ ಇತ್ತೀಚಿಗೆ ತಲೆತಗ್ಗಿಸುವ ಕೆಲಸಗಳು ನಡೆಯುತ್ತಿವೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಆಡಳಿತ ಯಂತ್ರ ಕುಸಿಯುತ್ತಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆತಂಕ ವ್ಯಕ್ತಪಡಿಸಿದರು.
ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಮುಗಿದ ಬಳಿಕವೂ ಹಬ್ಬದ ವಾತಾವರಣ ಇದೆ. ಆದರೆ ಈಗ ಕಳೆದ ಎರಡು ದಿನಗಳಿಂದ ಹೀನಕೃತ್ಯಗಳು ನಡೆದಿವೆ. ಮೈಸೂರು ಇತಿಹಾಸ ಸ್ವಚ್ಛತೆ ಒಳ್ಳೆಯ ಆಡಳಿತಕ್ಕೆ ಹೆಸರುವಾಸಿಯಾಗಿದೆ. ಆದರೆ ಇತ್ತೀಚೆಗೆ ಕಾನೂನು ಆಡಳಿತ ಕುಸಿಯುತ್ತಿದೆ. ಈ ಹಿಂದೆ ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಆಯಿತು. ನಂತರ 340 ಕೋಟಿ ಡ್ರಗ್ಸ್ ಪತ್ತೆಯಾಯಿತು. ಮಹಾರಾಷ್ಟ್ರ ಪೊಲೀಸರು ಇದನ್ನು ಕಂಡು ಹಿಡಿದರು. ಇದಾದ ಬಳಿಕ ಅರಮನೆ ಮುಂಭಾಗ ಮೊನ್ನೆ ಒಂದು ಕೊಲೆ ಆಗಿದೆ. ನಿನ್ನೆ ಚಿಕ್ಕ ಮಗು ಮೇಲೆ ಅತ್ಯಾಚಾರ ಕೊಲೆಯಾಗಿದೆ. ಬಲೂನ್ ಮಾರಾಟ ಮಾಡುವ ಮಗು ಮೇಲೆ ಹೀನ ಕೃತ್ಯ ಆಗಿದೆ ಎಂದು ಬೇಸರಿಸಿದರು.
ಇದನ್ನು ಓದಿ : ಯತೀಂದ್ರ ವಿರುದ್ಧ ಗಂಭೀರ ಆರೋಪ ಮಾಡಿದ ಪ್ರತಾಪ್ ಸಿಂಹ
ಮೈಸೂರಿನಲ್ಲಿ ಇಂತಹ ಘಟನೆಗಳು ಈ ಹಿಂದೆ ಆಗಿಲ್ಲ. ನಗರದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ನಗರದ ಹೃದಯ ಭಾಗದಲ್ಲೇ ಇಂತಹ ಘಟನೆಗಳು ನಡೆದರೆ ಹೇಗೆ. ಕಿಡಿಗೇಡಿಗಳಿಗೆ ಯಾವುದೇ ರೀತಿಯ ಭಯ ಇಲ್ಲ. ಸಿಎಂ ಸಿದ್ದರಾಮಯ್ಯ ಚುನಾವಣೆಯಲ್ಲಿ ಇದು ನನ್ನ ತವರು ಅಂತಾರೆ. ಇಂತಹ ಘಟನೆಗಳನ್ನು ಆಗದಂತೆ ತಡೆಯಲು ಆಗುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದರು.
ದಸರಾ ಪಾಸ್ ವಿಚಾರದಲ್ಲಿ ಗೊಂದಲ ಆಯಿತು. ಸಿಟ್ಟಿಂಗ್ ವ್ಯವಸ್ಥೆ ಕಡಿಮೆ ಮಾಡಿ ಪಾಸ್ ಹೆಚ್ಚು ಕೊಟ್ಟರು. ಪಾಸ್ ಇರೋರಿಗೂ ಅರಮನೆ ಒಳಗಡೆ ಬಿಡಲಿಲ್ಲ. ಇದು ಕೇವಲ ಕಾಂಗ್ರೆಸ್ ನಾಯಕರ ದಸರಾ ಆಯಿತು. ಜನ ಸಾಮಾನ್ಯರ ದಸರಾ ಆಗಲಿಲ್ಲ. ನಾಗರಿಕರಿಗೆ ಅನುಕೂಲ ಮಾಡಲಿಲ್ಲ. ಕೇವಲ ಉಳ್ಳವರ ದಸರಾ ದರ್ಬಾರ್ ಆಯಿತು ಎಂದು ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಯದುವೀರ್ ವಾಗ್ದಾಳಿ ನಡೆಸಿದರು.





