Mysore
17
few clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಕೊನೆ ಆಷಾಢ ಶುಕ್ರವಾರ : ಚಾಮುಂಡಿ ಬೆಟ್ಟಕ್ಕೆ ಹರಿದು ಬಂದ ಭಕ್ತ ಸಾಗರ

last friday of ashada month

ಮೈಸೂರು : ಆಷಾಢ ಮಾಸದ ಕಡೆಯ ಶುಕ್ರವಾರ ಚಾಮುಂಡಿಬೆಟ್ಟಕ್ಕೆ ಭಕ್ತಸಾಗರವೇ ಹರಿದುಬಂದಿತ್ತು. ಬೆಟ್ಟಕ್ಕೆ ಆಗಮಿಸಿದ ಲಕ್ಷಾಂತರ ಭಕ್ತರು ದುರ್ಗೆಯ ದರ್ಶನ ಪಡೆದು ಪಾವನರಾದರು. ಈ ಮೂಲಕ ಚಾಮುಂಡಿಬೆಟ್ಟದಲ್ಲಿ ಸಂಭ್ರಮ, ಸಡಗರದಿಂದ ಆಷಾಢ ಶುಕ್ರವಾರ ಸಂಪನ್ನವಾಯಿತು.

ತಾಯಿಯ ದರ್ಶನದ ಹಂಬಲದಿಂದ ಮಂಜು, ಮಳೆಯನ್ನೂ ಲೆಕ್ಕಿಸದೆ ಮುಂಜಾನೆಯಿಂದಲೇ ವಿವಿಧೆಡೆಗಳಿಂದ ಬೆಟ್ಟಕ್ಕೆ ಆಗಮಿಸಿದ ಭಕ್ತರು ನೂಕುನುಗ್ಗಲಿಲ್ಲದೆ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಂತು ದರ್ಶನ ಪಡೆದರು. ದೇವಸ್ಥಾನದ ಹೊರಗೆ ಹಿಮ ಮಳೆ ಸುರಿಯುತ್ತಿದ್ದರೆ, ದೇವಸ್ಥಾನದ ಒಳಗೆ, ಸರತಿ ಸಾಲಿನಲ್ಲಿ ಜಯಘೋಷಗಳು ಮೊಳಗುತ್ತಿದ್ದವು. ಯಾವುದೇ ಗಲಾಟೆ ಗೊಂದಲಗಳಿಗೆ ಆಸ್ಪದ ಕೊಡದೆ ಸಾವಧಾನವಾಗಿ ದೇವಸ್ಥಾನಕ್ಕೆ ತೆರಳಿ ಚಾಮುಂಡೇಶ್ವರಿಯ ದರ್ಶನ ಪಡೆದು ಭಕ್ತಿಭಾವ ಮೆರೆದರು.

ಹರಿದು ಬಂದ ಗಣ್ಯರ ದಂಡು
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ, ಕೆ.ಎಚ್.ಮುನಿಯಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕುಟುಂಬ, ಮಾಜಿ ಸಚಿವ ಎಚ್.ಡಿ ರೇವಣ್ಣ, ಎಂಎಲ್‌ಸಿ ಸೂರಜ್ ರೇವಣ್ಣ, ಭವಾನಿ ರೇವಣ್ಣ, ಸಿಎಂ ಪತ್ನಿ ಪಾರ್ವತಿ, ಸೊಸೆ ಸ್ಮಿತಾ ರಾಕೇಶ್ ಸೇರಿದಂತೆ ಅನೇಕ ಗಣ್ಯರು ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು.

ಮುಂಜಾನೆಯಿಂದಲೇ ಪೂಜೆ
ಕಡೆಯ ಆಷಾಢ ಶುಕ್ರವಾರವಾದ್ದರಿಂದ ಚಾಮುಂಡೇಶ್ವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಮುಂಜಾನೆ ೩ ಗಂಟೆಯಿಂದಲೇ ದೇವಸ್ಥಾನದಲ್ಲಿ ಪೂಜಾ ವಿಧಿವಿಧಾನಗಳು ಆರಂಭವಾದವು. ದೇವಿಗೆ ದೇವಾಲಯದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಮಹಾನ್ಯಾಸ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಕುಂಕುಮಾರ್ಚನೆ, ಏಕದಶ ಪುಷ್ಪಾರ್ಚನೆ, ಸಹಸ್ರನಾಮಾರ್ಚನೆ ಸೇರಿ ವಿವಿಧ ಪೂಜೆಗಳನ್ನು ನೆರವೇರಿಸಲಾಯಿತು. ೫.೩೦ರಿಂದ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಈ ಮಧ್ಯೆ ಬೆಳಗ್ಗೆ ೯.೩೦ಕ್ಕೆ ಮಹಾಮಂಗಳಾರತಿ, ಸಂಜೆ ೬.೩೦ರಿಂದ ೭ರವರೆಗೆ ತಾಯಿಗೆ ಮತ್ತೊಮ್ಮೆ ಮಹಾಮಂಗಳಾರತಿ ನೆರವೇರಿಸಲಾಯಿತು. ರಾತ್ರಿ ೧೦ಗಂಟೆವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ಸಿಂಹವಾಹಿನಿ ಅಲಂಕಾರ
ಕಳೆದ ಮೂರು ವಾರಗಳಂತೆ ದೇವಸ್ಥಾನ ವಿಶೇಷ ರೀತಿಯಲ್ಲಿ ಅಲಂಕೃತಗೊಂಡಿತ್ತು. ತಾಯಿ ಚಾಮುಂಡೇಶ್ವರಿಗೆ ವಿಶೇಷ ಸಿಂಹವಾಹಿನಿ ಅಲಂಕಾರ ಮಾಡಲಾಗಿತ್ತು. ವಿವಿಧ ಬಣ್ಣಗಳ ಸೇವಂತಿಗೆ, ಚೆಂಡು ಹೂ, ಗುಲಾಬಿ ಸೇರಿದಂತೆ ವಿವಿಧ ಬಗೆಯ ಹೂಗಳಿಂದ ದೇವಸ್ಥಾನದ ಆವರಣ ಅಲಂಕೃತಗೊಂಡಿತ್ತು. ದೇವಾಲಯದ ಪ್ರವೇಶದ್ವಾರ, ಹೊರಾವರಣವೂ ವಿಶೇಷವಾಗಿ ಸಿಂಗಾರಗೊಂಡಿತ್ತು. ಸಿಂಹವಾಹಿನಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ಚಾಮುಂಡೇಶ್ವರಿಯ ದರ್ಶನ ಪಡೆದು ಹೊರಬರುತ್ತಿದ್ದ ಭಕ್ತರಲ್ಲಿ ದನ್ಯತಾಭಾವ ಮೂಡಿತ್ತು.

ನಗರದ ಹಲವೆಡೆ ಪ್ರಸಾದ ವಿತರಣೆ
ಕಡೆಯ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಇರುವ ಚಾಮುಂಡೇಶ್ವರಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ರಸ್ತೆ, ವೃತ್ತಗಳಲ್ಲಿ ಚಾಮುಂಡೇಶ್ವರಿ ಭಾವಚಿತ್ರವಿರಿಸಿ, ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಪ್ರಸಾದ ವಿತರಣೆ ಮಾಡಲಾಯಿತು. ಅಗ್ರಹಾರ, ಚಾಮುಂಡಿಪುರಂ, ವಿದ್ಯಾರಣ್ಯಪುರಂ, ಚಾಮರಾಜ ಜೋಡಿ ರಸ್ತೆ, ಎಂ.ಜಿ.ರಸ್ತೆ, ಕೆ.ಜಿ.ಕೊಪ್ಪಲು, ಒಂಟಿಕೊಪ್ಪಲು. ಕುವೆಂಪುನಗರ, ರಾಮಕೃಷ್ಣನಗರ, ವಿಜಯನಗರ ಸೇರಿದಂತೆ ನಗರದೆಲ್ಲೆಡೆ ಹಲವೆಡೆ ಪ್ರಸಾದ ವಿತರಣೆ ಮಾಡಲಾಯಿತು. ಸಾರ್ವಜನಿಕರು ಸರತಿ ಸಾಲಿನಲ್ಲಿ ಪ್ರಸಾದ ಸ್ವೀಕರಿಸಿದರು.

Tags:
error: Content is protected !!