ಕೆ.ಆರ್.ನಗರ/ಮೈಸೂರು: ಕೆ.ಆರ್ ನಗರ ಪಟ್ಟಣದ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನೂತನ ಡಯಾಲಿಸಿಸ್ ಕೇಂದ್ರವನ್ನು ಶಾಸಕ ಡಿ.ರವಿಕುಮಾರ್ ಮಂಗಳವಾರ ಉದ್ಘಾಟಿಸಿದರು.
ನಂತರ ಮಾತಮಾಡಿದ ಅವರು, ತಾಲೂಕಿನಲ್ಲಿ ಮೂತ್ರಕೋಶದ ತೊಂದರೆಯಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಈ ಕೇಂದ್ರ ಹೆಚ್ಚು ಅನುಕೂಲವಾಗಿದೆ. ಬಡವರಿಗೆ ಡಯಾಲಿಸಿಸ್ ಮಾಡಿಸಿಕೊಳ್ಳುವುದು ದೊಡ್ಡ ಹೊರೆ. ವಾರಕ್ಕೆ ಮೂರು ಬಾರಿ ಮಾಡಿಸಿಕೊಳ್ಳಬೇಕಾಗುತ್ತದೆ. ಒಮ್ಮೆ ಮಾಡಿಸಿದರೆ 2,000 ರೂ.ಗಳಿಗಿಂತ ಹೆಚ್ಚಿದೆ. ಬಡವರಿಗೆ ಇಷ್ಟು ಮೊತ್ತ ನೀಡಿ ಡಯಾಲಿಸಿಸ್ ಮಾಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆಗಾಗಿ ಈ ಕೇಂದ್ರ ಬಡವರಿಗೆ ಹೆಚ್ಚು ನೆರವಾಗಲಿದೆ ಎಂದರು.
ಕಿಡ್ನಿ ವೈಫಲ್ಯವಾದಾಗ ಡಯಾಲಿಸಿಸ್ ಒಂದೇ ಮಾರ್ಗ. ಅದಕ್ಕಾಗಿ ಸರ್ಕಾರ ಬಡವರಿಗೆ ಸಹಾಯ ಮಾಡಬೇಕೆಂಬ ಉದ್ದೇಶದಿಂದ ಡಯಾಲಿಸಿಸ್ ಸೇವೆಗಳನ್ನು ಉಚಿತವಾಗಿ ನೀಡುತ್ತಿದೆ. ಆಸ್ಪತ್ರೆಯನ್ನು ಶುಚಿಯಾಗಿಡುವ ಜತೆಗೆ ರೋಗಿಗಳಿಗೆ ಡಾಕ್ಟರ್‌ಗಳು ಸ್ಪಂದಿಸಿ ಚಿಕಿತ್ಸೆ ನೀಡಬೇಕು ಎಂದು ಹೇಳಿದರು.





