ಎಚ್.ಡಿ.ಕೋಟೆ : ಒಂಟಿ ಸಲಗವೊಂದು ವಾಸದ ಮನೆಯ ಮೇಲೆ ದಾಳಿ ನಡೆಸಿ ನಾಶ ಮಾಡಿರುವ ಘಟನೆ ತಾಲ್ಲೂಕಿನ ಗಡಿಭಾಗದ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಟ್ಕೆಲ್‌ಗುಂಡಿ ಗ್ರಾಮದಲ್ಲಿ ಸೋಮವಾರ ಮಧ್ಯರಾತ್ರಿ ನಡೆದಿದೆ.
ಜಮೀನಿಗೆ ನುಗ್ಗಿದ ಕಾಡಾನೆ ತೆಂಗು, ಅಡಕೆ ಬೆಳೆಯನ್ನು ತಿಂದು ನಾಶ ಮಾಡುತ್ತಿದ್ದುದನ್ನು ನೋಡಿದ ರೈತ ಪುಟ್ಟರಾಜು ಲೈಟ್ ಹಾಕಿದಾಗ ಆಕ್ರೋಶಗೊಂಡು ಸಮೀಪದ ಮನೆಯ ಕಡೆ ಬಂದು ಮನೆಯನ್ನು ನಾಶ ಮಾಡಿದೆ.
ಇದರಿಂದ ಕುಟುಂಬಸ್ಥರು ಜೀವಭಯದಲ್ಲಿ ಕತ್ತಲೆಯಲ್ಲಿ ಕಾಲ ಕಳೆಯುವಂತಾಯಿತು. ಕಾಡು ಪ್ರಾಣಿಗಳ ಹಾವಳಿಯಿಂದ ಈ ಭಾಗದ ರೈತರು ಮತ್ತು ಜನಸಾಮಾನ್ಯರ ಪರಿಸ್ಥಿತಿ ಅತಂತ್ರವಾಗಿದೆ.
ಅಧಿಕಾರಿಗಳು ಸೂಕ್ತ ಪರಿಹಾರ ನೀಡಿ ಕಾಡುಪ್ರಾಣಿಗಳು ಜಮೀನುಗಳು ಮತ್ತು ಮನೆಗಳ ಬಳಿ ಬಾರದಂತೆ ಕ್ರಮ ಕೈಗೊಳ್ಳಬೇಕು ಎಂದು ರೈತರಾದ ಪುಟ್ಟರಾಜು, ರವಿ ಆಗ್ರಹಿಸಿದ್ದಾರೆ.





