ಎಚ್.ಡಿ.ಕೋಟೆ : ಕೇರಳ ರಾಜ್ಯದಲ್ಲಿ ತಾಯಿ ಆನೆಯಿಂದ ಬೇರ್ಪಟ್ಟು, ಬಳ್ಳೆ ಆನೆ ಸಾಕಾಣಿಕಾ ಕೇಂದ್ರದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಆರೈಕೆಯಲ್ಲಿದ್ದ ಆನೆ ಮರಿ ಅನಾರೋಗ್ಯದಿಂದ ಅಸ್ವಸ್ಥಗೊಂಡು, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ.
ಒಂದು ತಿಂಗಳಿಂದ ತಾಯಿ ಆನೆಯಿಂದ ಬೇರ್ಪಟ್ಟ ಮರಿ ಆನೆಯು ಕೇರಳದ ಪುಲ್ವಳ್ಳಿ ಗ್ರಾಮದ ಶಾಲೆಯ ಬಳಿ ಕಾಣಿಸಿಕೊಂಡಿತ್ತು. ನಂತರ ಈ ಮರಿಯನ್ನು ರಕ್ಷಿಸಲಾಗಿತ್ತು. ತಾಯಿ ಆನೆಯ ಬಳಿ ಸೇರಿಸಲು ಕೇರಳ ರಾಜ್ಯದ ಅರಣ್ಯ ಇಲಾಖೆ ಅಧಿಕಾರಿಗಳು ವಿಫಲವಾಗಿ ಕಬಿನಿ ನದಿಯ ಮತ್ತೊಂದು ದಡದಲ್ಲಿದ್ದ ನಾಗರಹೊಳೆ ಅರಣ್ಯದ ಡಿ.ಬಿ.ಕುಪ್ಪೆ ವ್ಯಾಪ್ತಿಯಲ್ಲಿ ತಂದುಬಿಟ್ಟಿದ್ದರು.
ಇಲ್ಲಿನ ಅರಣ್ಯ ಅಧಿಕಾರಿಗಳಾದ ಮಧು ಮತ್ತು ಹನುಮಂತರಾಜು ಹಾಗೂ ಸಿಬ್ಬಂದಿ ಆನೆಮರಿಯನ್ನು ತಾಯಿ ಆನೆ ಪತ್ತೆ ಹಚ್ಚಿ ಅದರ ಜತೆ ಸೇರಿಸಲು ಕೇರಳದ ಅಧಿಕಾರಿಗಳ ಜೊತೆ ಸಂಪರ್ಕ ಇಟ್ಟುಕೊಂಡು ಕೆಲಸ ನಿರ್ವಹಿಸಿದ್ದರು. ಆದರೆ, ತಾಯಿ ಆನೆಯ ಸುಳಿವು ಸಿಗಲಿಲ್ಲವಾದ್ದರಿಂದ ಮರಿಯನ್ನು ಬಳ್ಳೆ ಶಿಬಿರದಲ್ಲಿ ಒಂದು ತಿಂಗಳಿನಿಂದ ಆರೈಕೆ ಮಾಡುತ್ತಿದ್ದರು. ಆದರೆ, ಅಸ್ವಸ್ಥಗೊಂಡಿದ್ದ ಆನೆ ಮರಿ ಅತಿಸಾರ ಭೇದಿಯಿಂದ ನಿತ್ರಾಣಗೊಂಡು ಚೇತರಿಕೆ ಕಾಣದೆ ಮೃತಪಟ್ಟಿದೆ.
ಪಶುವೈದ್ಯಾಧಿಕಾರಿ ಡಾ.ಬಿ.ಬಿ.ಪ್ರಸನ್ನ ಮರಣೋತ್ತರ ಪರೀಕ್ಷೆ ನಡೆಸಿದರು. ಮೇಟಿಕುಪ್ಪೆ ವನ್ಯಜೀವಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಡಿ. ಮಧು, ಡಿ.ಬಿ.ಕುಪ್ಪೆ ವನ್ಯಜೀವಿ ವಲಯದ ಅರಣ್ಯಾಧಿಕಾರಿ ಹನುಮಂತರಾಜು ಹಾಜರಿದ್ದರು.





