ಮೈಸೂರು: ಕೇರಳ ರಾಜ್ಯದಲ್ಲಿ ಮದ್ಯ ನಿಷೇಧವಾಗಿರುವ ಪರಿಣಾಮ ಕೇರಳಿಗರ ಕಾಟಕ್ಕೆ ರಾಜ್ಯದ ಹಾಡಿ ಜನರು ಬೇಸತ್ತು ಹೋಗಿದ್ದಾರೆ.
ಮದ್ಯದ ಅಮಲಿನಲ್ಲಿ ತೇಲುವ ಕೇರಳದವರಿಂದ ರಾಜ್ಯದ ಜನತೆ ಬೇಸತ್ತಿದ್ದು, ಕರ್ನಾಟಕಕ್ಕೆ ಎಣ್ಣೆ ಹೊಡೆಯಲೆಂದು ಬರುವ ಕೇರಳದವರಿಂದ ಸಂಕಷ್ಟ ಎದುರಾಗಿದೆ.
ಎಣ್ಣೆ ಹೊಡೆಯಲೆಂದೇ ರಾಜ್ಯಕ್ಕೆ ಕೇರಳಿಗರು ಲಗ್ಗೆ ಇಡುತ್ತಿದ್ದು, ರಾಜ್ಯದ ಗಡಿ ಭಾಗದಲ್ಲಿ ಪಾನಮತ್ತರಾಗಿ ತೂರಾಡುತ್ತಿದ್ದಾರೆ. ಮದ್ಯದ ನಶೆಯಲ್ಲಿ ಜನರು ಎಲ್ಲೆಂದರಲ್ಲಿ ಬಿದ್ದು ಒದ್ದಾಡುತ್ತಿದ್ದು, ಕಾಡು ಪ್ರಾಣಿಗಳು ಓಡಾಡುವ ಸ್ಥಳಗಳಲ್ಲೂ ಕೇರಳಿಗರು ನಶೆಯಲ್ಲಿ ತೇಲಾಡುತ್ತಿದ್ದಾರೆ.
ಕೇರಳಿಗರು ಬಾವಲಿ ಚೆಕ್‌ಪೋಸ್ಟ್ ಮುಖಾಂತರ ತಂಡೋಪತಂಡವಾಗಿ ಕರ್ನಾಟಕಕ್ಕೆ ಬಂದು ಮದ್ಯ ಸೇವನೆ ಮಾಡುತ್ತಿದ್ದು, ರಾಜ್ಯದ ಜನತೆಗೆ ಸಂಕಷ್ಟ ತಂದೊಡ್ಡಿದ್ದಾರೆ.
ದಟ್ಟ ಅರಣ್ಯ ನಾಗರಹೊಳೆಯ ಬಾವಲಿ ಚೆಕ್‌ಪೋಸ್ಟ್ ರಸ್ತೆಯಲ್ಲಿ ಸಂಜೆ 6 ರಿಂದ ಬೆಳಗ್ಗೆ 6ರವರಗೆ ಸಂಚಾರಕ್ಕೆ ನಿಷೇಧವಿದೆ. ಆದರೆ ಈ ಭಾಗದಲ್ಲಿ ರಾತ್ರಿ 10 ಗಂಟೆಯವರೆಗೂ ಮದ್ಯದಂಗಡಿಗಳು ಮಾತ್ರ ಎಂದಿನಂತೆ ತೆರೆಯಲಿವೆ. ಅಂಗಡಿಗಳಲ್ಲಿ ಮದ್ಯ ಸೇವಿಸಿ ಕೇರಳಿಗರು ಹಾಡಿಗಳಿಗೆ ನುಗ್ಗುತ್ತಿದ್ದು, ಹಾಡಿ ಹೆಣ್ಣು ಮಕ್ಕಳಿಗೆ ಭಾರೀ ಕಿರಿಕಿರಿ ಉಂಟು ಮಾಡಿದ್ದಾರೆ.





