Mysore
17
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಕೆಂಚನಹಳ್ಳಿ ಗ್ರಾಮಸ್ಥರ ಪ್ರತಿಭಟನೆಗೆ ತೆರೆ : ಸಂಸದ ಸುನಿಲ್ ಬೋಸ್ ಮಧ್ಯಸ್ಥಿಕೆ ಫಲಪ್ರದ

ನೆ-ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ಶೀಘ್ರವೇ ಪರಿಹಾರ – ಸಂಸದರ ಭರವಸೆ

ಮೈಸೂರು : ಕಬಿನಿ ಅಣೆಕಟ್ಟು ನಿರ್ಮಾಣದ ಸಂದರ್ಭದಲ್ಲಿ ಮನೆ ಮತ್ತು ಜಮೀನು ಕಳೆದುಕೊಂಡು ನಿರಾಶ್ರಿತರಾದ ಹೆಚ್. ಡಿ. ಕೋಟೆ ತಾಲ್ಲೂಕಿನ ಕೆಂಚನಹಳ್ಳಿ ಗ್ರಾಮದ ನಿವಾಸಿಗಳು, ಸೂಕ್ತ ಜಮೀನು ಹಂಚಿಕೆಗಾಗಿ ಕಳೆದ ಏಳು ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆಗೆ ಇಂದು ತೆರೆ ಬಿದ್ದಿದೆ. ಸಂಸದ ಸುನಿಲ್ ಬೋಸ್ ಅವರು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿದ ನಂತರ, ಅವರ ಮನವಿಯನ್ನು ಪುರಸ್ಕರಿಸಿ ಪ್ರತಿಭಟನೆಯನ್ನು ಕೈಬಿಡಲಾಗಿದೆ.

ಸಂಸದ ಸುನಿಲ್ ಬೋಸ್ ಅವರು ಶಾಸಕರಾದ ಅನಿಲ್ ಚಿಕ್ಕಮಾದುರವರೊಂದಿಗೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು. ನಿರಾಶ್ರಿತರ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗಳು ಮತ್ತು ಅರಣ್ಯ ಅಧಿಕಾರಿಗಳೊಂದಿಗೆ ತಕ್ಷಣವೇ ಮಾಹಿತಿ ಪಡೆದ ಸಂಸದರು, ಈ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವುದಾಗಿ ಭರವಸೆ ನೀಡಿದರು. ಸಂಸದರ ಮನವಿಯಂತೆ ಮತ್ತು ಭರವಸೆಯ ಮೇರೆಗೆ ಗ್ರಾಮಸ್ಥರು ಪ್ರತಿಭಟನೆಯನ್ನು ಹಿಂಪಡೆದಿರುತ್ತಾರೆ.

ಇದನ್ನು ಓದಿ: ರಾಜ್ಯದಲ್ಲಿ 15000 ಕೋಟಿ ರಾಜಸ್ವ ಕೊರತೆ : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪ

ಸಮಸ್ಯೆಯ ಹಿನ್ನೆಲೆ:
ಕಬಿನಿ ಅಣೆಕಟ್ಟು ನಿರ್ಮಾಣದ ಸಂದರ್ಭದಲ್ಲಿ ಕೆಂಚನಹಳ್ಳಿ ಗ್ರಾಮದ ನಿರಾಶ್ರಿತರ ಪುನರ್ವಸತಿಗಾಗಿ ಸರ್ವೇ ನಂ.1 ರಲ್ಲಿ ಒಟ್ಟು 840 ಎಕರೆ ಜಮೀನನ್ನು ಬಿಡುಗಡೆಗೊಳಿಸಲಾಗಿತ್ತು. ಈ ಪೈಕಿ, ಈಗಾಗಲೇ 495 ಎಕರೆ ಜಮೀನನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ. ಆದರೆ, ಉಳಿದ ಸುಮಾರು 345 ಎಕರೆ ಜಮೀನು ಕಂದಾಯ ಇಲಾಖೆಗೆ ಸೇರಿರುವ ಕಾರಣದಿಂದಾಗಿ ಉಳಿದ ಸಂತ್ರಸ್ತರಿಗೆ ಹಂಚಿಕೆ ಪ್ರಕ್ರಿಯೆ ವಿಳಂಬವಾಗಿದೆ.

ಸಂಸದರ ಶೀಘ್ರ ಕ್ರಮ:
ಸಮಸ್ಯೆಯ ಗಂಭೀರತೆಯನ್ನು ಮನಗಂಡ ಸಂಸದ ಸುನಿಲ್ ಬೋಸ್ ಅವರು, ಭೂಮಿ ಹಂಚಿಕೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಸಂಸದರು, “ಕೆಂಚನಹಳ್ಳಿ ಗ್ರಾಮದ ನಿರಾಶ್ರಿತರ ಸಮಸ್ಯೆ ನ್ಯಾಯಯುತವಾಗಿದೆ. ಇಂದು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ, ಈ ಸಮಸ್ಯೆಯನ್ನು ಕಾಲಮಿತಿಯೊಳಗೆ ಬಗೆಹರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ನಿರಾಶ್ರಿತರಿಗೆ ನ್ಯಾಯ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ,” ಎಂದು ತಿಳಿಸಿದ್ದಾರೆ.

ಶೀಘ್ರದಲ್ಲೇ ಕಂದಾಯ ಮತ್ತು ಅರಣ್ಯ ಇಲಾಖೆಗಳ ಸಮನ್ವಯದೊಂದಿಗೆ ಉಳಿದ ಫಲಾನುಭವಿಗಳಿಗೆ ಜಮೀನು ಹಂಚಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲಾಗುವುದು ಎಂದು ಈ ಮೂಲಕ ಸಂಸದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:
error: Content is protected !!