ನಂಜನಗೂಡು : ತಾಲ್ಲೂಕಿನ ಕಳಲೆ ಗ್ರಾಮದ ಲಕ್ಷ್ಮೀಕಾಂತಸ್ವಾಮಿ ರಥೋತ್ಸವ ಶನಿವಾರ ಅಪಾರ ಸಂಖ್ಯೆಯ ಭಕ್ತರ ಸಮ್ಮಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಬೆಳಿಗ್ಗೆ ಲಕ್ಷ್ಮೀಕಾಂತಸ್ವಾಮಿಗೆ ದೇವಾಲಯದ ಪ್ರಧಾನ ಅರ್ಚಕ ಎಚ್.ಡಿ.ವಿನಯ್ ಆಚಾರ್ಯ ನೇತೃತ್ವದಲ್ಲಿ ಅವಭೃತ ತೀರ್ಥಸ್ನಾನದ ನಂತರ ಚೂರ್ಣಾಭಿಷೇಕ ಹಾಗೂ ವಿವಿಧ ಪೂಜಾ ವಿಧಿವಿಧಾನಗಳನ್ನು ನಡೆಸಲಾಯಿತು. ನಂತರ ಋತ್ವಿಕರು ಉತ್ಸವ ಮೂರ್ತಿಗೆ ಚಿನ್ನದ ಒಡವೆಗಳಿಂದ ಅಲಂಕರಿಸಿ ಪಲ್ಲಕ್ಕಿಯಲ್ಲಿ ಇರಿಸಿ ದೇವಾಲಯದ ಮುಂಭಾಗ ಹೊತ್ತು ತಂದರು.
ರಥವನ್ನು ವಿವಿಧ ಬಗೆಯ ಹೂವು, ತಳಿರು ತೋರಣ, ಬಣ್ಣ-ಬಣ್ಣದ ಒಟ್ಟೆಗಳಿಂದ ಅಲಂಕರಿಸಲಾಗಿತ್ತು. ಸ್ವಾಮಿಯ ಉತ್ಸವಮೂರ್ತಿಯನ್ನು ರಥದಲ್ಲಿ ಕೂರಿಸಲಾಯಿತು.
ನಂತರ ಭಕ್ತರು ‘ಶ್ರೀನಿವಾಸ’, ‘ಗೋವಿಂದ’ ಎಂಬ ನಾಮಸ್ಮರಣೆಯೊಂದಿಗೆ ರಥವನ್ನು ಎಳೆದರು. ದೇವರಿಗೆ ಹಣ್ಣು-ಧವನ ಅರ್ಪಿಸಿ ಭಕ್ತಿಭಾವ ಮೆರೆದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ರಥೋತ್ಸವ ನಡೆಯಿತು. ಭಕ್ತರಿಗೆ ಭೋಜನದ ವ್ಯವಸ್ಥೆ ಕಲ್ಪಿಸಲಾಗಿತ್ತು.
ದೇವಾಲಯದ ಪಾರುಪತ್ತೇದಾರ ಎಚ್.ಎಸ್.ಜಯರಾಮ್, ಅರ್ಚಕ ರಂಗರಾಜನ್ ಉಸ್ತುವಾರಿಯಲ್ಲಿ ರಥೋತ್ಸವ ನಡೆಯಿತು.