ಕೆ.ಆರ್.ನಗರ : ಪ್ರತ್ಯೇಕ ಪ್ರಕರಣಗಳಲ್ಲಿ ವಿದ್ಯುತ್ ಸ್ಪರ್ಶಕ್ಕೀಡಾಗಿ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಒಂದು ಪ್ರಕರಣದಲ್ಲಿ ಹೊಸ ಅಗ್ರಹಾರ ಹೋಬಳಿಯ ಅಡಗೂರು ಮಾರಗೌಡನಹಳ್ಳಿ ಮಹದೇವ್ (೫೮) ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಆಕಸ್ಮಿಕವಾಗಿ ತುಳಿದು ಮೃತಪಟ್ಟಿದ್ದಾರೆ. ಇವರಿಗೆ ಪತ್ನಿ ಲಕ್ಷ್ಮಮ್ಮ ಹಾಗೂ ಮೂವರು ಪುತ್ರಿಯರು ಇದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಕೆಸ್ತೂರು ಕೊಪ್ಪಲು ಗ್ರಾಮದ ರಮೇಶ್ ಅವರ ಪುತ್ರ ಪುನೀತ್(೨೨) ಸಾವಿಗೀಡಾಗಿದ್ದಾರೆ. ತಮ್ಮ ಹಳೆಯ ಮನೆಯನ್ನು ದುರಸ್ಥಿ ಮಾಡಿಸುತ್ತಿದ್ದ ಇವರು, ನೀರಿನ ತೊಟ್ಟಿಯಿಂದ ನೀರು ಮೇಲೆತ್ತುವ ಮೋಟಾರ್ ಕೆಟ್ಟುಹೋಗಿದ್ದರಿಂದ ಅದನ್ನು ಸರಿಪಡಿಸಲು ನೀರಿನ ತೊಟ್ಟಿಗೆ ಇಳಿದಾಗ ವಿದ್ಯುತ್ ಶಾಕ್ ನಿಂದ ಮೃತಪಟ್ಟಿದ್ದಾರೆ. ಮೃತ ಪುನೀತ್ ಕಳೆದ ತಿಂಗಳಷ್ಟೆ ಮದುವೆಯಾಗಿದ್ದು, ಪತಿ ಕಳೆದು ಕೊಂಡ ಪತ್ನಿ ಬೇಬಿ ಆಕ್ರಂದನ ಮುಗಿಲು ಮುಟ್ಟಿತ್ತು.
ಸುದ್ದಿ ತಿಳಿಯುತ್ತಿದಂತೆ ಶಾಸಕ ಡಿ.ರವಿಶಂಕರ್ ಮಾರಗೌಡನಹಳ್ಳಿ ಗ್ರಾಮಕ್ಕೆ ತೆರಳಿ ಅವಘಡದ ಬಗ್ಗೆ ಪೂರ್ಣ ಮಾಹಿತಿ ಪಡೆದು ಸರ್ಕಾರದಿಂದ ಪರಿಹಾರ ಧನವನ್ನು ಕೊಡಿಸುವ ಭರವಸೆ ನೀಡಿದರು.





