Mysore
21
mist

Social Media

ಭಾನುವಾರ, 11 ಜನವರಿ 2026
Light
Dark

ಸೆ.15 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ : ಮೈಸೂರಲ್ಲಿ ಬೃಹತ್‌ ಸೈಕಲ್‌ ಜಾಥಾ

ಮೈಸೂರು : ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಸೆ.೧೫ರಂದು ಜಿಲ್ಲಾಮಟ್ಟದಲ್ಲಿ ಬೃಹತ್ ಸೈಕಲ್ ಜಾಥಾ ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದ್ದಾರೆ.

ಅಂದು ಬೆಳಿಗ್ಗೆ ೬ ಗಂಟೆಗೆ ಮೈಸೂರು ಜಿಲ್ಲೆಯಿಂದ ೧೦ ಜನ ಬೈಕ್ ರೈಡರ್ಸ್‌ಗಳನ್ನು ಬೈಕ್ ಜಾಥಾದ ಮೂಲಕ ಮೈಸೂರು ನಗರದಿಂದ ಬೆಂಗಳೂರಿಗೆ ಕಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇವರು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಅರಿವು ಮೂಡಿಸುವಲ್ಲಿ ಪ್ರತಿ ಜಿಲ್ಲೆಯಿಂದ ಬರುವ ಬೈಕ್ ಜಾಥಾವನ್ನು ಸೇರಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಈ ಬಾರಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯ ಅಂಗವಾಗಿ ಸರ್ಕಾರವು ಸಾರ್ವಜನಿಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ವ್ಯಾಪಕವಾಗಿ ಅರಿವು ಮೂಡಿಸುವ ಉದ್ದೇಶದಿಂದ ‘ನನ್ನ ಮತ ನನ್ನ ಹಕ್ಕು’ ಎಂಬ ಶೀರ್ಷಿಕೆಯಡಿ ಮೂರು ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಿ ಆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನ.೨೬ರಂದು ನಡೆಯುವ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ಮಾಡಲು ನಿರ್ಧರಿಸಿದೆ.

ಸೆ.೧೫ರಂದು ಮೈಸೂರು ಜಿಲ್ಲಾಮಟ್ಟದಲ್ಲಿ ಚರ್ಚಾ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಛಾಯಾಚಿತ್ರ ಸ್ಪರ್ಧೆಗಳಿಗೆ ಅಧಿಕೃತವಾಗಿ ವಿದ್ಯುಕ್ತ ಚಾಲನೆ ನೀಡಲಾಗುವುದು. ಸೆ.೧೫ರಿಂದ ನ.೨೬ರವರೆಗೂ ಜಿಲ್ಲೆಯಲ್ಲಿ ವಿವಿಧ ಹಂತಗಳಲ್ಲಿ ಎಲ್ಲಾ ವರ್ಗದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಈ ಮೇಲಿನ ಸ್ಪರ್ಧೆಗಳನ್ನು ನಡೆಸಿ ಅದರಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ರಾಜ್ಯಮಟ್ಟಕ್ಕೆ ಕಳಿಸಲಾಗುವುದು. ಜಿಲ್ಲಾಮಟ್ಟದಲ್ಲೂ ಪ್ರಶಸ್ತಿ ವಿತರಣೆ ಮಾಡಲಾಗುವುದು. ೧೪ ವರ್ಷ ಮೇಲ್ಪಟ್ಟ ಎಲ್ಲರೂ ಈ ಜಾಥಾದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಸೈಕಲ್ ಜಾಥಾವು ಸಿದ್ಧಾರ್ಥ ನಗರದಲ್ಲಿರುವ ಜಿಲ್ಲಾಽಕಾರಿಗಳ ಕಚೇರಿಯ ಆವರಣದಿಂದ ಪ್ರಾರಂಭವಾಗಿ ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿ ಪುರಭವನದ ಮುಂಭಾಗದ ಅಂಬೇಡ್ಕರ್ ಪುತ್ತಳಿ ಬಳಿ ಮುಕ್ತಾಯಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ ಆಯಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಯನ್ನು ಹಾಗೂ ಮೊ.ಸಂ.: ೯೪೮೨೩ ೦೦೪೦೦ನ್ನು ಸಂಪರ್ಕಿಸಬಹುದಾಗಿದೆ.

Tags:
error: Content is protected !!