ಮೈಸೂರು : ನೆರೆ ಜಿಲ್ಲೆ ಹಾಸನದಲ್ಲಿ ಹೃದಯಾಘಾತ ಪ್ರಕರಣ ಹೆಚ್ಚಾದ ಹಿನ್ನೆಲೆ ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯತ್ತ ಸಾರ್ವಜನಿಕರು ದಾಂಗುಡಿ ಇಡುತ್ತಿದ್ದಾರೆ.
ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಗಳಿಂದ ಸಾರ್ವಜನಿಕರು ಮುಂಜಾನೆಯೆಯಿಂದಲೇ ಆಸ್ಪತ್ರೆಯ ಓಪಿಡಿಗೆ ಬಂದಿದ್ದಾರೆ. ಜನ ನಿಯಂತ್ರಣ ಮಾಡಲಾಗದೆ ಆಸ್ಪತ್ರೆ ಸಿಬ್ಬಂದಿ ಬ್ಯಾರಿಕೇಡ್ ಸಿಸ್ಟಮ್ ಮಾಡಿದ್ದಾರೆ. ಸರತಿ ಸಾಲಲ್ಲಿ ನಿಂತಿರುವ ಸಾರ್ವಜನಿಕರಲ್ಲಿ ಯುವಕ ಯುವತಿಯರ ಸಂಖ್ಯೆಯೇ ಗಣನೀಯವಾಗಿದೆ.
ಈ ಹಿಂದೆ ನಿತ್ಯ 500ರಷ್ಟು ಬರುತ್ತಿದ್ದ ಸಾರ್ವಜನಿಕರ ಸಂಖ್ಯೆ ದಿಢೀರ್ 1,500ಕ್ಕೂ ಅಧಿಕ ಸಂಖ್ಯೆಗೆ ಏರಿಕೆಯಾಗಿದ್ದು, ಬಂದಿರುವವರಲ್ಲಿ ಮೊದಲ ಬಾರಿ ಬಂದಿರುವವರ ಸಂಖ್ಯೆಯೇ ಅಧಿಕವಾಗಿದೆ ಎನ್ನುತ್ತದೆ ಆಸ್ಪತ್ರೆ ಆಡಳಿತ ಮಂಡಳಿ.
ಜನ ಪ್ಯಾನಿಕ್ ಆಗಿ ಸಣ್ಣ ನೋವು ಬಂದ್ರೂ ಆಸ್ಪತ್ರೆಗೆ ಬರ್ತಿದ್ದಾರೆ. ಆದ್ರೆ ಹೃದಯ ಸಮಸ್ಯೆಯಿಂದ ಬರುತ್ತಿರುವವರು ಕಡಿಮೆ, ಮಾನಸಿಕ ಒತ್ತಡ, ಸಾಲದ ಸಮಸ್ಯೆ, ನಿರುದ್ಯೋಗ, ಜಂಕ್ ಫುಡ್ ಸೇರಿ ಹಲವು ಸಮಸ್ಯೆಗಳಿಂದ ಹೃದಯಾಘಾತ ಸಂಭವಿಸುತ್ತದೆ. ಜನ ಪ್ಯಾನಿಕ್ ಆಗಬೇಡಿ, ಸುಸ್ತು, ಬೆವರುವಿಕೆ,ಎದೆನೋವು ಇದ್ದಾಗ ಮಾತ್ರ ಆಸ್ಪತ್ರೆಗೆ ಬನ್ನಿ, ಅತಿ ಹೆಚ್ಚು ರೋಗಿಗಳಿಂದಲೂ ಆಸ್ಪತ್ರೆ ಮೇಲೆ ಒತ್ತಡ ಇದೆ. ಜನ ಗಾಬರಿಯಾಗೊದು ಬೇಡ ಎಂದು ಜಯದೇವ ಆಸ್ಪತ್ರೆಯ ಹೃದಯ ತಜ್ಞ ಡಾ.ದಿನೇಶ್ ಸಲಹೆ ನೀಡಿದ್ದಾರೆ.





