Mysore
23
overcast clouds
Light
Dark

ಕೆಆರ್‌ಎಸ್ ಜಲಾಶಯಕ್ಕೆ ಒಳಹರಿವು ಹೆಚ್ಚಳ

ಮೈಸೂರು: ಕಳೆದೆರಡು ವಾರಗಳಿಂದ  ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವುದು ಜನರಲ್ಲಿ ಭರವಸೆ ಮೂಡಿಸಿದೆ. ಕಳೆದ ವರ್ಷ ಮುಂಗಾರು ಕೈಕೊಟ್ಟು ಕೆರೆ, ಕಟ್ಟೆ, ಅಣೆಕಟ್ಟು, ಜಲಾಶಾಯಗಳೆಲ್ಲಾ ಬರಿದಾಗಿದ್ದವು. ಈ ವರ್ಷದ ಮುಂಗಾರು ಪೂರ್ವ ಮಳೆ ಅಬ್ಬರಿಸುತ್ತಿದ್ದು, ಬೇಸಿಗೆ ಬಿಸಿಲಿನಿಂದ ಒಣಗಿದ ಹಳ್ಳ, ಕೊಳ್ಳ, ನದಿಗಳೆಲ್ಲಾ ಮತ್ತೆ ಮರು ಜೀವ ಪಡೆದುಕೊಳ್ಳುತ್ತಿವೆ.

ಕಳೆದ ವರ್ಷ ಬರಿದಾಗಿದ್ದ ಕೆಆರ್‌ಎಸ್‌ ಅಣೆಕಟ್ಟಿಗೆ ಈ ವರ್ಷ ಭರಪೂರ ನೀರು ತುಂಬುವ ನಿರೀಕ್ಷೆ ಸಿಕ್ಕಿದೆ. ಮುಂಗಾರು ಆಗಮನಕ್ಕೆ ಮುನ್ನವೇ ಜಲಾಶಯದ ಒಳಹರಿವು ಹೆಚ್ಚಿದ್ದು, ದಿನಕಳೆದಂತೆ ಒಳಹರಿವಿನ ಪ್ರಮಾಣ ಹೆಚ್ಚುತ್ತಿದೆ.

ಜನವರಿ, ಫೆಬ್ರವರಿಗಳಲ್ಲಿ ಅಲ್ಪ ಪ್ರಮಾಣದ ನೀರನ್ನು ಕೆಆರ್‌ಎಸ್‌ ತನ್ನ ಒಡಲಲ್ಲಿರಿಸಿಕೊಂಡಿತ್ತು. ದಿನಕಳೆದಂತೆ ನೀರು ಬರಿದಾಗುತ್ತ ಹೋಯಿತು. ಈ ನಡುವೆ ಬೆಳೆ ರಕ್ಷಣೆಗೆ ಕಾಲುವೆಗಳಿಗೆ ನೀರು ಹರಿಸಿ ಎಂದು ರೈತ ಸಂಘಗಳು ಆಗ್ರಹಿಸಿದರು ಕಾವೇರಿ ನೀರಾವರಿ ಸಲಹಾ ಮಂಡಳಿ ಈ ಬೇಡಿಕೆಯನ್ನ ಸಾರಾಸಗಟಾಗಿ ತಳ್ಳಿ ಹಾಕಿ ಕೆಆರ್‌ಎಸ್ ನೀರು ಕೇವಲ ಕುಡಿಯಲು ಮಾತ್ರ ಬಳಸಲಾಗುವುದು ಎಂದು ಕಟ್ಟಪ್ಪಣೆ ಹೊರಡಿಸಿತ್ತು. ‌

ಮಾರ್ಚ್‌, ಏಪ್ರಿಲ್‌ ತಿಂಗಳಲ್ಲಿ ಕೆಆರ್‌ಎಸ್‌ ನಂಬಿದ್ದ ಜನರಿಗೆ ಕುಡಿಯುವ ನೀರಿಗೂ ಸಂಕಷ್ಟ ಎದುರಾಯಿತು. ನೀರಿನ ಪ್ರಮಾಣ ಅತ್ಯಂತ ಕನಿಷ್ಠ ಮಟ್ಟ ಕುಸಿತ ಕಂಡು ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿತ್ತು. ಆದರೆ ಮೇ ತಿಂಗಳಲ್ಲಿ ರಾಜ್ಯ ಪ್ರವೇಶಿಸಿದ ಮುಂಗಾರು ಪೂರ್ವ ಮಳೆ ಇಂತ ಆತಂಕವನ್ನೆಲ್ಲಾ ದೂರ ಮಾಡಿದೆ.

ಮೇ 15 ರಲ್ಲಿ 903 ಕ್ಯೂಸೆಕ್ಸ್‌ ಇದ್ದ ಒಳಹರಿವು ಒಂದೇ ದಿನದಲ್ಲಿ ಎರಡುಪಟ್ಟು ಹೆಚ್ಚಾಗಿದ್ದು, ಮೇ 16ರಂದು 1771 ಕ್ಯೂಸೆಕ್ಸ್‌ ಏರಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಮೂನ್ಸೂಚನೆ ಇದೆ.

ಮೇ.16ರ ಬೆಳಿಗ್ಗೆ 8 ಗಂಟೆವರೆಗೆ 1771 ಒಳಹರಿವು ಇತ್ತು, ಹೊರ ಹರಿವು 153 ಕ್ಯೂಸೆಕ್‌ ನೀರು ಬಿಡಲಾಗಿದೆ. ಕೆಆರ್‌ಎಸ್‌ ಒಟ್ಟು 124.80 ಅಡಿ, 49.452 ಟಿಎಂಸಿ ನೀರು ಸಾಮಥ್ಯ ಹೊಂದಿದ್ದು, ಸದ್ಯ 80 ಅಡಿ, 10.895 ಕ್ಯೂಸೆಕ್ಸ್‌ ನೀರು ಸಂಗ್ರಹವಾಗಿದೆ.

ಭಾರಿ ಮಳೆ ಮೂನ್ಸೂಚನೆ

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆಯ ಮೂನ್ಸುಚನೆ  ಇದೆ.  ಅಲ್ಲದೇ ಮೇ.31 ರಂದು ರಾಜ್ಯ ಪ್ರವೇಶಿಸುವ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಈ  ಬಾರಿ ಉತ್ತಮ ಮಳೆಯಾಗಿ, ರಾಜ್ಯದ ಎಲ್ಲಾ ಅಣೆಕಟ್ಟೆಗಳು ತುಂಬುವ ನಿರೀಕ್ಷೆ ಇದೆ.

Tags: