ನಂಜನಗೂಡು: ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವಾಹನವನ್ನು ತಡೆದ ಪೊಲೀಸರು 20 ಕರುಗಳನ್ನು ರಕ್ಷಿಸಿರುವ ಘಟನೆ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನವನ್ನು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಹಿಡಿದಿದ್ದಾರೆ.
ಪೊಲೀಸ್ ಕಾರ್ಯಾಚರಣೆಗೆ ಹೆದರಿದ ಕಿಡಿಗೇಡಿಗಳು ವಾಹನವನ್ನು ವೇಗವಾಗಿ ಓಡಿಸಿದ ಪರಿಣಾಮ ವಾಹನ ಉರುಳಿ ಬಿದ್ದಿದೆ. ವಾಹನವನ್ನು ಸೀಜ್ ಮಾಡಿದ ಪೊಲೀಸರು 20 ಕರುಗಳನ್ನು ರಕ್ಷಣೆ ಮಾಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಬಂದಾಗ ಮೂಕ ಪ್ರಾಣಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಸ್ಥಳೀಯರ ಸಹಾಯದಿಂದ ಕರುಗಳನ್ನು ರಕ್ಷಿಸಿ ಪಿಂಜರಾಪೋಲ್‌ಗೆ ರವಾನಿಸಿದ್ದಾರೆ. ಬೊಲೆರೋ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





