ನಂಜನಗೂಡು : ದಕ್ಷಿಣ ಕಾಶಿ ಎಂದೇ ಹೆಸರಾಗಿರುವ, ಆದಾಯದಲ್ಲಿ ರಾಜ್ಯದಲ್ಲಿ ಐದನೇ ಸ್ಥಾನದಲ್ಲಿರುವ ನಂಜನಗೂಡು ಶ್ರೀಕಂಠೇಶ್ವರ ದೇವಾಯದಲ್ಲಿ ಲಕ್ಷಾಂತರ ರೂ. ಅವ್ಯವಹಾರ ನಡೆದಿದೆ ಎನ್ನಲಾದ ಆರೋಪದ ಕುರಿತು ಉಪವಿಭಾಗಾಧಿಕಾರಿಗಳು ಬುಧವಾರದಿಂದ ತನಿಖೆ ಆರಂಭಿಸಿದ್ದಾರೆ.
ದೇವಾಲಯದ ಆಕ್ರಮಗಳ ಕುರಿತು ಅಪರ ಜಿಲ್ಲಾಧಿಕಾರಿಗಳಿಗೆ ಬಂದ ದೂರಿನ ಅನ್ವಯ ಈ ತನಿಖೆ ಆರಂಭಿಸಲಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಇಲ್ಲಿಂದ ವರ್ಗಾವಣೆಯಾಗಿದ್ದ ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಜಗದೀಶ ಕುಮಾರ್ ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಹುದ್ದೆಯಲ್ಲಿ ಮುಂದುವರಿದಿರುವಂತೆಯೇ ಅವರ ಅಕ್ರಮಗಳ ಕುರಿತು ಈ ತನಿಖೆ ಪ್ರಾರಂಭವಾಗಿದೆ.
ಇದನ್ನೂ ಓದಿ:-ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ
ಬುಧವಾರ ದೇವಾಲಯದ ಕಾರ್ಯಾಲಯಕ್ಕೆ ದಿಢೀರ್ ಆಗಮಿಸಿದ ಉಪವಿಭಾಗಾಧಿಕಾರಿ ಆಶಪ್ಪ ಪೂಜಾರ್ ಹಾಗೂ ನಂಜನಗೂಡು ತಹಸಿಲ್ದಾರ್ ಶಿವಕುಮಾರ್ ಕ್ಯಾಸನೂರು ಅವರ ನೇತೃತ್ವದ ಅಧಿಕಾರಿಗಳ ತಂಡ ದೇವಾಲಯದ ಅಧಿಕಾರಿಗಳ ಮೇಲೆ ಬಂದಿರುವ ದೂರಿನ ಸಮಗ್ರ ತನಿಖೆಗೆ ಮುಂದಾಗಿದೆ.
ದೇವಾಲಯದಲ್ಲಿ ಕಾಮಗಾರಿಗಳನ್ನೇ ನಡೆಸದೇ ಬಿಲ್ ಮಾಡಲಾಗಿದೆ. ಒಂದೇ ಕಾಮಗಾರಿಯನ್ನು ತುಂಡು ತುಂಡಾಗಿಸಿ ಪತ್ರಿಕಾ ಪ್ರಕಟಣೆಯನ್ನೇ ನೀಡದೆ ತಮಗೆ ಬೇಕಾದವರಿಗೆ ತುಂಡು ಕಾಮಗಾರಿ ನೀಡಿ ಹಣ ಗುಳುಂ ಮಾಡಲಾಗಿದೆ. ತುಮಕೂರಿನವರ ಹೆಸರಲ್ಲಿ ಈ ರೀತಿ ಕೋಟ್ಯಂತರ ರೂ.ಗಳನ್ನು ದೇವಾಲಯಕ್ಕೆ ವಂಚಿಸಲಾಗಿದೆ. ದೇವಾಲಯದ ನೌಕರರಿಗೆ ನೀಡಿರುವ ತುಟ್ಟಿ ಭತ್ಯೆಯಲ್ಲೂ ಅಕ್ರಮಗಳಾಗಿವೆ. ವಾಹನ ಶುಲ್ಕ ವಸೂಲಿಯಲ್ಲಿ ಕೋಟ್ಯಂತರ ರೂ. ಲೂಟಿ ಮಾಡಲಾಗಿದೆ ಎಂಬ ದುರುಗಳು ಅಪರ ಜಿಲ್ಲಾಧಿಕಾರಿಗಳಿಗೆ ಬಂದಿದ್ದು, ಈ ದೂರಿನ ಸತ್ಯಾಸತ್ಯತೆ ತಿಳಿಯಲು ಈ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.




