Mysore
31
clear sky

Social Media

ಶುಕ್ರವಾರ, 07 ಫೆಬ್ರವರಿ 2025
Light
Dark

ಮಗನ ಎದುರೇ ಪತ್ನಿಗೆ ಬೆಂಕಿ ಹಚ್ಚಿದ ಪಾಪಿ ಪತಿ

ಮೈಸೂರು: ಹೆಂಡತಿ ತವರು ಮನೆಗೆ ಹೋದಳೆಂದು ಕೋಪಗೊಂಡ ಪತಿರಾಯ ತನ್ನ ಮಗನ ಎದುರೇ ಪತ್ನಿಗೆ ಬೆಂಕಿ ಹಚ್ಚಿದ ಅಮಾನವೀಯ ಘಟನೆ ಜಿಲ್ಲೆಯ ಎಚ್.ಡಿ.ಕೋಟೆಯ ಹನುಮಂತ ನಗರದಲ್ಲಿ ನಡೆದಿದೆ.

ಮಧುರ ಎಂಬುವವರೇ ಗಂಭೀರ ಗಾಯಗೊಂಡಿರುವ ಪತ್ನಿಯಾಗಿದ್ದು, ಆಕೆಯ ಗಂಡ ಮಲ್ಲೇಶ್‌ ನಾಯ್ಕ್‌ ಎಂಬಾತನಿಂದ ಕೃತ್ಯ ನಡೆದಿದೆ.

ಗಂಭೀರ ಗಾಯಗೊಂಡಿರುವ ಮಹಿಳೆಯನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ವಿಜಯನಗರ ಜಿಲ್ಲೆ ಕೂಡ್ಲಗಿ ತಾಲ್ಲೂಕಿನ ಬಿಬಿ ತಾಂಡದವನಾದ ಮಲ್ಲೇಶ್‌, ಕಳೆದ ಎಂಟು ವರ್ಷಗಳ ಹಿಂದೆ ಅದೇ ಗ್ರಾಮದ ಮಧುರಳನ್ನು ವಿವಾಹವಾಗಿದ್ದ.

ಸದ್ಯ ಮಲ್ಲೇಶ್‌ ನಾಯ್ಕ್ ಎಚ್.ಡಿ.ಕೋಟೆಯ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಮೆಕಾನಿಕ್‌ ಆಗಿ ಕೆಲಸ ಮಾಡುತ್ತಿದ್ದ.

ವರದಕ್ಷಿಣ ತರುವಂತೆ ಹೆಂಡತಿಗೆ ಪದೇ ಪದೇ ಕಿರುಕುಳ ನೀಡುತ್ತಿದ್ದ ಮಲ್ಲೇಶ್‌, ಪ್ರತಿ ದಿನ ಕುಡಿದು ಬಂದು ಜಗಳವಾಡುತ್ತಿದ್ದ. ಈ ನಡುವೆ ಕೆಲ ದಿನಗಳ ಹಿಂದೆ ಮಧುರ ತವರು ಮನೆಗೆ ಹೋಗಿ ಬಂದಿದ್ದರು. ಈ ವಿಚಾರವನ್ನೇ ಇಟ್ಟುಕೊಂಡು ಪತ್ನಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾನೆ.

ಈ ಸಂಬಂಧ ಎಚ್.ಡಿ.ಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

 

Tags: