ಹುಣಸೂರು: ಇಲ್ಲಿನ ಬನ್ನಿಕುಪ್ಪೆ ಗ್ರಾಮದ ಮಾರಿಗುಡಿ ಆವರಣದಲ್ಲಿ ಅಸ್ಪೃಶ್ಯತಾ ನಿವಾರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಅಧಿಕಾರಿ ಅಶೋಕ್ ಕುಮಾರ್, ಗ್ರಾಮ ಪಂಚಾಯತಿ ಅಧ್ಯಕ್ಷ ಗೋವಿಂದ ನಾಯಕ್, ಜ್ಞಾನಜ್ಯೋತಿ ಸಂಸ್ಥೆಯ ಕಾರ್ಯದರ್ಶಿ ಹೇಮಾವತಿ ಹಾಗೂ ಗಣ್ಯರು ಉದ್ಘಾಟಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಸಮಾಜ ಕಲ್ಯಾಣ ಅಧಿಕಾರಿ ಅಶೋಕ್ ಕುಮಾರ್, ಸ್ವಾತಂತ್ರ್ಯ ಬಂದು ೭೫ ವರ್ಷಗಳು ಕಳೆದರೂ ಅಸ್ಪೃಶ್ಯತೆ ನಿವಾರಣೆ ಆಗಿಲ್ಲ. ಸಾರ್ವಜನಿಕರಲ್ಲಿ ಅರಿವಿನ ಕೊರತೆ ಇದಕ್ಕೆ ಕಾರಣವಾಗಿದೆ. ಆದ್ದರಿಂದ ಹಿಂದುಳಿದ ವರ್ಗದವರು ಉತ್ತಮ ಶಿಕ್ಷಣವನ್ನು ಪಡೆದು ಜ್ಞಾನವನ್ನು ಹೆಚ್ಚಿಸಿಕೊಂಡು ಸಮಾಜದಲ್ಲಿ ಮಾದರಿ ಪ್ರಜೆಗಳಾಗಿ ಬದುಕಬೇಕು ಎಂದು ಸಲಹೆ ನೀಡಿದರು.
ದಸಂಸ ಮುಖಂಡ ನಿಂಗರಾಜ್ ಮಲ್ಲಾಡಿ ಮಾತನಾಡಿ, ಅಸ್ಪೃಶ್ಯತೆ ಎಂಬುದು ಅನಿಷ್ಟ ಪದ್ಧತಿ, ಮನುಕುಲಕ್ಕೆ ಸವಲಾಗಿ ನಿಂತಿದೆ. ಬುದ್ಧ, ಬಸವ, ಕನಕದಾಸರು, ಅಂಬೇಡ್ಕರ್ ಅವರು ಹೋರಾಟಗಳ ಮೂಲಕ ಸಮಾಜದ ಅಂಕು ಡೊಂಕುಗಳಿಗೆ ಕಾಯಕಲ್ಪ ನೀಡಲು ಶ್ರಮಿಸಿದರು. ಅಸ್ಪೃಶ್ಯತೆಯನ್ನು ಹೋಗಲಾಡಿಸುವುದು ಕಷ್ಟ ಸಾಧ್ಯ ಎನ್ನುವ ಪರಿಸ್ಥಿತಿ ಇದೆ. ಜಾತಿ-ಜಾತಿಗಳ ನಡುವಿನ ಸಂಘರ್ಷ ಮರೆಯಾಗಬೇಕು ಎಂದು ಹೇಳಿದರು.
ಮಾನವ ಹಕ್ಕುಗಳ ಬಗ್ಗೆ ಶೇಷಾದ್ರಿ ಮಾಹಿತಿ ನೀಡಿದರು. ತಾ.ಪಂ. ಇಒ ಹೊಂಗಯ್ಯ ಮಾತನಾಡಿ, ಅಸ್ಪೃಶ್ಯತೆ ಎನ್ನುವುದು ಗುಪ್ತಗಾಮಿನಿಯಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಜೀವಂತವಾಗಿದೆ. ಎಲ್ಲ ಕೋಮಿನ ಜನರು ಅಣ್ಣತಮ್ಮಂದಿರಂತೆ ಬದುಕಬೇಕಾದರೆ ಎಲ್ಲರಲ್ಲೂ ಮಾನವೀಯ ಗುಣಗಳು ಇರಬೇಕು ಎಂದು ತಿಳಿಸಿದರು.
ಕಾರ್ಯದರ್ಶಿ ಹೇಮಾವತಿ ಮಾತನಾಡಿ, ಜೀವನದಲ್ಲಿ ಗುರಿ ಹೊಂದಲು ಪ್ರಜ್ಞೆ, ಪ್ರತಿಜ್ಞೆ, ಗುರಿ ಇವು ಮುಖ್ಯ, ಮಾನವ ಅಭಿವೃದ್ಧಿ ಹೊಂದಬೇಕಾದರೆ ಮುಖ್ಯವಾಗಿ ಶಿಕ್ಷಣವನ್ನು ಪಡೆಯಬೇಕು,ಪರಸ್ಪರ ಸಹ ಬಾಳ್ವೆ ,ಸಹಭಾಗಿತ್ವ ,ಸೇವಾ ಮನೋಭಾವನೆ ಬೆಳೆಸಿಕೊಂಡು ಸಮಾಜಕ್ಕಾಗಿ ಶ್ರಮಿಸಬೇಕು ಎಂದರು.
ಮಾನವ ಹಕ್ಕುಗಳ ಕಾರ್ಯಕರ್ತರಾದ ಗುರುಪ್ರಸಾದ್, ಗ್ರಾ.ಪಂ. ಅಧ್ಯಕ್ಷ ಗೋವಿಂದ ನಾಯಕ್, ತಾ.ಪಂ ಮಾಜಿ ಸದಸ್ಯ ಪ್ರಸನ್ನ ಕುಮಾರ್, ಪಿಡಿಓ ರಾಘವೇಂದ್ರ ಪ್ರಸನ್ನ, ಕಾರ್ಯದರ್ಶಿ ವೇದಮೂರ್ತಿ, ಸದಸ್ಯರಾದ ನಿಂಗೇಗೌಡ, ಪರಶುರಾಮ್, ಲೋಕೇಶ್, ಚಂದ್ರಶೇಖರ್, ಮುಖಂಡರಾದ ಕೂಸಪ್ಪ , ವಕೀಲ ಪುಟ್ಟರಾಜು, ಡಾ. ಪವಿತ್ರ ಕೃಷ್ಣ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸುತ್ತಮುತ್ತಲ ೭ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಸಿಬ್ಬಂದಿ, ಮಹಿಳಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಬೆಳಕು ಕಲಾತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.