ಮೈಸೂರು: 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಐತಿಹಾಸಿಕ ಗ್ರಾಮ ಸೋಮನಾಥಪುರದ ಚನ್ನಕೇಶವ ದೇವಾಲಯದ ಆವರಣದಲ್ಲಿಂದು ನೂರಾರು ಯೋಗಪಟು ವಿದ್ಯಾರ್ಥಿಗಳಿಂದ ಯೋಗಭ್ಯಾಸ ಜರುಗಿತು.
ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಎಂಬ ಘೋಷವಾಕ್ಯದಡಿ ಆಯುಷ್ ಹಾಗೂ ಶಿಕ್ಷಣ ಮಂತ್ರಾಲಯದ ಆಶ್ರಯದಲ್ಲಿ ನಡೆದ ಈ ಯೋಗ ದಿನಾಚರಣೆಯಲ್ಲಿ ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆ ಹಾಗೂ ಜವಹರ್ ಲಾಲ್ ನವೋದಯ ವಿದ್ಯಾಲಯವು ನೇತೃತ್ವ ವಹಿಸಿತ್ತು. ಜೊತೆಗೆ ಉರ್ದು ಶಾಲೆ ಹಾಗೂ ಸ್ಥಳೀಯ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಉನ್ನತ ಶಿಕ್ಷಣ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಆರ್ಮಸ್ಟ್ರಾಂಗ್ ಪಾಮೆ, ಉತ್ತಮ ಆರೋಗ್ಯಕ್ಕೆ ಯೋಗ ಅತ್ಯವಶ್ಯಕ. ದಿನನಿತ್ಯ ಜೀವನದಲ್ಲಿ ಯೋಗ ಅಳವಡಿಸಿಕೊಂಡು ದೈಹಿಕ ಆರೋಗ್ಯ ಕಾಪಾಡಿಕೊಳ್ಳಿ ಎಂದು ಹೇಳಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಂತೆ ಯೋಗ ನಡೆಯುತ್ತಿದೆ. ಇದೊಂದು ಉತ್ತಮವಾದ ಅನುಭವ. ಜಗತ್ತಿಗೆ ಭಾರತ ಯೋಗವನ್ನು ಕೊಡುಗೆಯಾಗಿ ನೀಡಿದೆ.
ಯೋಗ ಅಳವಡಿಸಿಕೊಂಡು ದೈಹಿಕವಾಗಿ ಉತ್ತಮವಾಗುವುದರ ಜೊತೆಗೆ ಜೀವನಕ್ಕೆ ಉತ್ತೇಜನ ನೀಡುತ್ತದೆ ಎಂದರು.





