Mysore
23
broken clouds
Light
Dark

ಪ್ರಜಾಪ್ರಭುತ್ವಕ್ಕಾಗಿ ಮಾನವ ಸರಪಳಿ| ಜಿಲ್ಲೆಯಲ್ಲಿ 60 ಕಿ,ಮೀ ಮಾನವ ಸರಪಳಿ, 60 ಸಾವಿರ ಜನ ಭಾಗಿ – ಡಿ.ಸಿ. ಲಕ್ಷ್ಮೀಕಾಂತ ರೆಡ್ಡಿ

ಕೈ- ಕೈ ಜೋಡಿಸಿ, ಪ್ರಜಾಪ್ರಭುತ್ವ ಗಟ್ಟಿಗೊಳಿಸಿ

ಮೈಸೂರು:  “ಪ್ರಜಾಪ್ರಭುತ್ವಕ್ಕಾಗಿ ಕರ್ನಾಟಕದಲ್ಲಿ ಮಾನವ ಸರಪಳಿ” ಎಂಬ ಧ್ಯೇಯ ವಾಕ್ಯದೊಂದಿಗೆ ಸೆ. 15 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಈ ಸಂಬಂಧ ಜಿಲ್ಲೆಯಾದ್ಯಂತ 60 ಕಿ.ಮೀ. ಮಾನವ ಸರಪಳಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಜಿಲ್ಲೆಯ ಪ್ರತಿಯೊಬ್ಬ ಅಧಿಕಾರಿ ಹಾಗೂ ಸಾರ್ವಜನಿಕರು ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಜಿ ಲಕ್ಷೀಕಾಂತ ರೆಡ್ಡಿ  ಹೇಳಿದರು.

ಇಂದು ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ನಡೆದ “ಪ್ರಜಾಪ್ರಭುತ್ವಕ್ಕಾಗಿ ಕರ್ನಾಟಕದಲ್ಲಿ ಮಾನವ ಸರಪಳಿ” (ಸಮಾನತೆ, ಭ್ರಾತೃತ್ವ ಮತ್ತು ಸ್ವಾತಂತ್ರ್ಯ) ಎಂಬ ಧೈಯವಾಕ್ಯದೊಂದಿಗೆ ‘ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆ ಆಚರಿಸುವ ಸಂಬಂಧ ಕಾರ್ಯಕ್ರಮಗಳ ರೂಪುರೇಷೆ ಕುರಿತಂತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಜಾಪ್ರಭುತ್ವ ಎಂಬುದು ಕೇವಲ ಅಧಿಕಾರಿಗಳದ್ದಲ್ಲ. ಇದು ಪ್ರತಿಯೊಬ್ಬ ವ್ಯಕ್ತಿಯದ್ದಾಗಿದೆ. ಇಂತಹ ಕಾರ್ಯಕ್ರಮಕ್ಕೆ ಸಾರ್ವಜನಿಕರು ಸ್ವಯಿಚ್ಛೆಯಿಂದ ಪಾಲ್ಗೊಂಡಾಗ ಮಾತ್ರವೇ ನಿರೀಕ್ಷಿಸಿದ ಪ್ರತಿಫಲ ದೊರೆತು, ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ. ಹಾಗಾಗಿ ಸರಪಳಿಯು ಏರ್ಪಡುವ ಸ್ಥಳಗಳಲ್ಲಿ ಜನರು ನಮ್ಮೊಂದಿಗೆ ಸಹಕರಿಸಬೇಕು ಎಂದರು.

ಕಾರ್ಯಕ್ರಮವು ಸೆಪ್ಟೆಂಬರ್ 15ರಂದು ಬೆಳಗ್ಗೆ 8:30 ಗಂಟೆಯಿಂದ 9:30 ಗಂಟೆಯವರೆಗೆ ನಡೆಯಲಿದ್ದು, ಸರಪಳಿಯು ಸಿದ್ದಲಿಂಗಪುರದಿಂದ ಆರಂಭಗೊಳ್ಳುತ್ತದೆ. ಮುಂದುವರೆದಂತೆ ಅರಮನೆ ಮುಂಭಾಗದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಎದುರು ಇರುವ ಡಾ. ಬಿಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮುಂದುವರೆಯುತ್ತದೆ.

ಮಾನವ ಸರಪಳಿಯನ್ನು ನಿರ್ಮಾಣ ಮಾಡಲು ಸುಮಾರು 60 ಸಾವಿರಕ್ಕೂ ಹೆಚ್ಚಿನ ಜನರ ಅವಶ್ಯಕತೆ ಇದ್ದು, ಇದಕ್ಕೆ ಅಧಿಕಾರಿಗಳು, ಶಾಲಾ -ಕಾಲೇಜು ವಿದ್ಯಾರ್ಥಿಗಳು, ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳು, ಎನ್ ಸಿ ಸಿ , ಎನ್ ಎಸ್ ಎಸ್, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು, ಪೌರ ಕಾರ್ಮಿಕರು, ಗ್ರಾಮ ಪಂಚಾಯಿತಿಯ ಸದಸ್ಯರು ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡು ಸರಪಳಿಯು ಯಶಸ್ವಿಗೊಳ್ಳುವಂತೆ ನೋಡಿಕೊಳ್ಳಬೇಕು. ಇದಕ್ಕೆ ವಿದ್ಯಾಸಂಸ್ಥೆಗಳು, ಸಂಘ ಸಂಸ್ಥೆಗಳು ಹಾಗೂ ಇಲಾಖೆಗಳು ಸಹಕರಿಸಬೇಕು ಎಂದು ಹೇಳಿದರು.

ಸರಪಳಿಯು ಆರಂಭವಾದ ಪ್ರತಿ 100 ಮೀಟರ್ ಗೆ ಒಬ್ಬರು ಸೆಕ್ಷನ್ ಅಧಿಕಾರಿ, ಪ್ರತಿಯೊಂದು ಕಿಲೋಮೀಟರ್ ಗೆ ಏರಿಯಾ ಆಫೀಸರ್ ಹಾಗೂ ಪ್ರತಿ ಮಲ್ಟಿಪಲ್ ಕಿಲೋಮಿತೆ ಒಬ್ಬರು ತಾಲೂಕು ಅಧಿಕಾರಿಯನ್ನು ನೇಮಿಸಲಾಗಿರುತ್ತದೆ. ಅವರು ತಮ್ಮ ವ್ಯಾಪ್ತಿಗೆ ಜನರನ್ನು ಸೇರಿಸಿ ಸರಪಳಿಯನ್ನು ನಿರ್ಮಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂದು ತಿಳಿಸಿದರು.

ಇದೊಂದು ಸರ್ಕಾರದ ಮಹತ್ವಕಾಂಕ್ಷೆ ಕಾರ್ಯಕ್ರಮವಾಗಿದ್ದು, ಇದನ್ನು ಪ್ರತಿಯೊಬ್ಬರೂ ಗಂಭೀರವಾಗಿ ಪರಿಗಣಿಸಬೇಕು. ಮುಂಬರುವ ದಿನಗಳಲ್ಲಿ ಈ ಸಂಬಂಧ ಹಲವಾರು ಸಭೆಗಳನ್ನು ನಡೆಸಿ ಕಾರ್ಯಕ್ರಮವು ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೆ.ಎಂ ಗಾಯತ್ರಿ ಮಾತನಾಡಿ, ಸರ್ಕಾರವು ವಹಿಸಿರುವಂತೆ ಜಿಲ್ಲೆಯಲ್ಲಿ 60 ಕಿ ಮೀ ಮಾನವ ಸರಪಳಿಯನ್ನು ನಿರ್ಮಾಣ ಮಾಡಲು ಜಿಲ್ಲೆಯಲ್ಲಿನ ನಿರ್ದಿಷ್ಟ ಅಂತರಕ್ಕೆ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದ್ದು, ನೇಮಕಗೊಂಡ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಜನರನ್ನು ಸೇರಿಸಿ ಸರಪಳಿ ನಿರ್ಮಿಸಿ ಕಾರ್ಯಕ್ರಮಕ್ಕೆ ಯಾವುದೇ ರೀತಿಯ ತೊಂದರೆಗಳು ಎದುರಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ವಿವಿಧ ಸಂಘ ಸಂಸ್ಥೆಗಳ ಮುಖಂಡರು ಮಾತನಾಡಿ, ಈ ಬಗೆಗೆ ಹೆಚ್ಚು ಪ್ರಚಾರ ನೀಡಬೇಕು, ಕರಪತ್ರ, ಭಿತ್ತಿಪತ್ರಗಳ ಮೂಲಕ ಎಲ್ಲಾ ವರ್ಗದ ಜನರು ಭಾಗಿಯಾಗುವಂತೆ ನೋಡಿಕೊಳ್ಳಬೇಕು ಹಾಗೂ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಮುಡಾ ಆಯುಕ್ತರಾದ ರಘುನಂದನ್ ಎ ಎನ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ರಂಗೇಗೌಡ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು, ವಿದ್ಯಾಸಂಸ್ಥೆಯ ಮುಖ್ಯಸ್ಥರು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.