ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ ಏಕತಾ ಮಾಲ್(ಯೂನಿಟಿ ಮಾಲ್) ಕಾಮಗಾರಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಕರ್ನಾಟಕ ವಸ್ತು ಪ್ರದರ್ಶನ ಪ್ರಾಽಕಾರದ ಆವರಣದಲ್ಲಿ ಕೈಗೊಂಡಿರುವ ಏಕತಾ ಮಾಲ್ ನಿರ್ಮಾಣ ಕಾಮಗಾರಿಗೆ ಪ್ರಾರಂಭದಲ್ಲೇ ಕಾನೂನು ತೊಡಕು ಎದುರಾಗಿದ್ದು, ನ್ಯಾಯಾಲಯದಲ್ಲಿ ಇತ್ಯರ್ಥವಾಗುವ ತನಕವೂ ಮುಂದುವರಿಯದಂತಾಗಿದೆ. ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರು ಸಲ್ಲಿಸಿರುವ ಅರ್ಜಿಯನ್ನು ಮಾನ್ಯ ಮಾಡಿರುವ ಹೈಕೋರ್ಟ್ ಸದ್ಯಕ್ಕೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಸಿಲ್ದಾರ್, ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿ ಎರಡು ವಾರಗಳೊಳಗೆ ಲಿಖಿತ ಉತ್ತರ ನೀಡುವಂತೆ ಸೂಚನೆ ನೀಡಿದೆ.
ಜಿಐ ಟ್ಯಾಗ್ ಹೊಂದಿರುವ ದೇಶೀಯ ಉತ್ಪನ್ನಗಳು, ಪಾರಂಪರಿಕ ಕರಕುಶಲ ವಸ್ತುಗಳು, ಆಯಾಯ ಜಿಲ್ಲೆಗಳಲ್ಲಿರುವ ಪ್ರಮುಖ ಉತ್ಪನ್ನಗಳನ್ನು ಪರಿಚಯ ಮಾಡಿಕೊಡುವ ಜತೆಗೆ, ಮಾರಾಟಕ್ಕೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಏಕತಾ ಮಾಲ್ ನಿರ್ಮಾಣ ಯೋಜನೆಗೆ ಅನುಮೋದನೆ ನೀಡಿ, ೧೯೩ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿತ್ತು. ಇದರ ನಿರ್ಮಾಣದ ಹೊಣೆಯನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಅಭಿವೃದ್ಧಿ ಮಂಡಳಿಗೆ ವಹಿಸಲಾಗಿತ್ತು. ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಯೂನಿಟಿ ಮಾಲ್ ನಿರ್ಮಾಣಕ್ಕೆ ಬೇಕಾದ ಆರು ಎಕರೆ ಭೂಮಿಯನ್ನು ಹಸ್ತಾಂತರ ಮಾಡಿತ್ತು. ಇದರಿಂದಾಗಿ ಈ ಜಾಗದಲ್ಲಿ ಶಂಕುಸ್ಥಾಪನೆ ನೆರವೇರಿಸಿ ಕಾಮಗಾರಿ ಆರಂಭಿಸಲಾಗಿತ್ತು. ಇದೀಗ ಪ್ರಮೋದಾದೇವಿ ಒಡೆಯರ್ ಅವರು, ಯೂನಿಟಿ ಮಾಲ್ ನಿರ್ಮಿಸುತ್ತಿರುವ ಕುರುಬಾರಹಳ್ಳಿ ಸರ್ವೆ ನಂಬರ್ ಭೂಮಿ, ಗರಿಕೆಮಾಳ ಸರ್ವೆ ನಂ. ೧ರ ೬.೫ ಎಕರೆ ಪ್ರದೇಶವು ತಮ್ಮದೆಂದು ನ್ಯಾಯಾಲಯದ ಮೊರೆ ಹೋಗಿದ್ದರು. ಭೂಮಿಯು ರಾಜಮನೆತನಕ್ಕೆ ಸೇರಿದೆಂದು ಹೇಳಿರುವ ಜತೆಗೆ, ಕೆಲವು ಸರ್ವೆ ನಂಬರ್ ಭೂಮಿಯು ರಾಜಮನೆತನಕ್ಕೆ ಸೇರಿದ್ದೆಂದು ತೀರ್ಪು ಬಂದಿತ್ತು. ಇದರ ಆಧಾರದ ಮೇಲೆ ಪ್ರಮೋದಾದೇವಿ ಒಡೆಯರ್ ಅವರು ಹೈಕೋರ್ಟ್ ಮೊರೆ ಹೋಗಿ ತಡೆಯಾಜ್ಞೆ ಕೋರಿದ್ದರು. ಅರ್ಜಿದಾರರ ಮನವಿ ಪುರಸ್ಕರಿಸಿದ ನ್ಯಾಯಾಽಶರು, ಕಾಮಗಾರಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಆದೇಶ ನೀಡಿದ್ದಾರೆ. ಇದರಿಂದಾಗಿ ಸದ್ಯಕ್ಕೆ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ.




