Mysore
22
overcast clouds
Light
Dark

ವಿಧಾನ ಪರಿಷತ್‌ ಚುನಾವಣೆ: ಯತೀಂದ್ರ ಪರ ಬ್ಯಾಟಿಂಗ್‌ ಮಾಡಿದ ಎಚ್‌.ಸಿ ಮಹದೇವಪ್ಪ

ಮೈಸೂರು: ವಿಧಾನ ಪರಿಷತ್‌ ಚುನಾವಣೆ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಸ್ಥಾನ ನೀಡಲಾಗುವುದು ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಸಿ ಮಹದೇವಪ್ಪ ಅವರು ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಪರವಾಗಿ ಬ್ಯಾಟಿಂಗ್‌ ಮಾಡಿದ್ದಾರೆ.

ಈ ಸಂಬಂದ ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ವಿಧಾನ ಪರಿಷತ್‌ ಚುನಾವಣೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರ ಪರವಾಗಿ ಹೈಕಮಾಂಡ್‌ ತೀರ್ಮಾನ ಕೈಗೊಳ್ಳಲಿದೆ. ನಮ್ಮದೇ ಸರ್ಕಾರ ಇರುವ ಕಾರಣ ವಿಧಾನ ಪರಿಷತ್‌ಗೆ ಲಾಭಿ ಹೆಚ್ಚಾಗಲಿದೆ. ಪರಿಷತ್‌ ಚುನಾವಣೆಯಲ್ಲಿ ಯಾವಾಗಲೂ ಲಾಭಿ ಇದ್ದೇ ಇರುತ್ತದೆ ಎಂದು ಎಚ್‌.ಸಿ ಮಹದೇವಪ್ಪ ಹೇಳಿದರು.

ಇನ್ನು ಈ ಬಾರಿಯ ವಿಧಾನ ಪರಿಷತ್‌ ಚುನಾವಣೆಯನ್ನು ನಾವು ಗೆದ್ದೇ ಗೆಲ್ಲುತ್ತೇವೆ. ಬಿಜೆಪಿ-ಜೆಡಿಎಸ್‌ ಮೈತ್ರಿಯಿಂದ ನಮಗೆ ಯಾವುದೇ ಹಿನ್ನಡೆಯಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

2023ರ ವಿಧಾನ ಸಭೆ ಚುನಾವಣೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರನ್ನು ಕಣದಿಂದ ದೂರ ಸರಿಸಿ ಅವರ ತಂದೆ ಸಿದ್ದರಾಮಯ್ಯ ಅವರು ಸ್ಪರ್ಧಿಸಿದ್ದರು. ಇನ್ನು ಈ ಸಂಬಂಧ ಅವರ ತಂದೆಗಾಗಿ ತಮ್ಮ ಕ್ಷೇತ್ರವನ್ನೇ ಯತೀಂದ್ರ ಬಿಟ್ಟುಕೊಟ್ಟಿದ್ದರು. ಹೈಕಮಾಂಡ್‌ ಆಜ್ಞೆಯಂತೆ ಕ್ಷೇತ್ರ ಬಿಟ್ಟುಕೊಟ್ಟ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಮುಂದಿನ ದಿನಗಳಲ್ಲಿ ನೆರವಾಗುವುದಾಗಿ ಕಾಂಗ್ರೆಸ್‌ ಹೈ ಕಮಾಂಡ್‌ ಹೇಳಿತ್ತು. ಅದರಂತೆ ಈಗ ಎಂಎಲ್‌ಸಿ ಭಾಗ್ಯ ಸಿಗಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.