ಮೈಸೂರು: ಸಿದ್ದರಾಮಯ್ಯ ಸಿಎಂ ಅದಾಗಲೆಲ್ಲಾ ಬೆಂಗಳೂರು ಅರಮನೆ ವಿಚಾರಕ್ಕೆ ಮೈಸೂರು ಮಹಾರಾಜರ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಇಂದು(ಜನವರಿ.25) ಬೆಂಗಳೂರು ಅರಮನೆ ಮೈದಾನದ ಜಾಗವನ್ನು ಬಳಸಿಕೊಳ್ಳುವುದನ್ನು ನಿಯಂತ್ರಿಸಲು ಸುಗ್ರೀವಾಜ್ಞೆ ಹೊರಡಿಸುವ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಶುಕ್ರವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿರುವುದಕ್ಕೆ ನನ್ನ ವಿರೋಧವಿದೆ. ಸಿದ್ದರಾಮಯ್ಯ ಅವರು ಸಿಎಂ ಆಗಿ ಅಧಿಕಾರಕ್ಕೆ ಬಂದಾಗೆಲ್ಲಾ ಬೆಂಗಳೂರು ಅರಮನೆ ವಿಚಾರದಲ್ಲಿ ಗೊಂದಲ ಮೂಡಿಸುತ್ತಾರೆ ಎಂದು ಕಿಡಿಕಾರಿದರು.
ಸಿಎಂ ಸಿದ್ದರಾಮಯ್ಯ ಅವರು ಸಚಿವ ಸಂಪುಟದಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಬದಲು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರೊಂದಿಗೆ ಕುಳಿತು ಮಾತನಾಡಿಕೊಂಡು ಸೆಟಲ್‌ಮೆಂಟ್ ಮಾಡಬಹುದಿತ್ತು. ಆದರೆ ಸಿದ್ದರಾಮಯ್ಯ ಅವರು ಅಧಿಕಾರ ಇದೆ ಎಂದು ಸುಗ್ರೀವಾಜ್ಞೆ ತರುವುದು ಸರಿಯಲ್ಲ. ಅವರು ರಾಜಮನೆತನಕ್ಕೆ ಅನವಶ್ಯಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಲೋಕಾಯುಕ್ತ ಸಂಸ್ಥೆ ಸರ್ಕಾರದ ಕೈಗೊಂಬೆ
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಕ್ಲೀನ್‌ಚೀಟ್ ನೀಡಲು ಲೋಕಾಯುಕ್ತ ಸಂಸ್ಥೆ ನಿರ್ಧಾರಿಸಿದೆ. ಲೋಕಾಯುಕ್ತ ಸಂಸ್ಥೆ ಸರ್ಕಾರದ ಕೈಗೊಂಬೆಯಾಗಿದೆ. ಲೋಕಾಯುಕ್ತ ಅಧಿಕಾರಿಗಳನ್ನು ನೇಮಿಸುವುದು ಸರ್ಕಾರವಾಗಿದೆ. ಹೀಗಾಗಿ ಲೋಕಾಯುಕ್ತ ಅಧಿಕಾರಿಗಳು ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಾರೆ ಎಂದು ಆರೋಪಿಸಿದರು.