Mysore
27
broken clouds

Social Media

ಗುರುವಾರ, 13 ಫೆಬ್ರವರಿ 2025
Light
Dark

ಕಾಂಗ್ರೆಸ್‌ ಸರ್ಕಾರ, ರಾಜ್ಯಕ್ಕಿದ್ದ ಹೆಸರನ್ನು ಸರ್ವನಾಶ ಮಾಡಲು ಹೊರಟಿದೆ: ಕೇಂದ್ರ ಸಚಿವ ಕುಮಾರಸ್ವಾಮಿ ಕಿಡಿ

ಮೈಸೂರು: ಕಾಂಗ್ರೆಸ್‌ ಸರ್ಕಾರ ಉತ್ತಮವಾಗಿ ಸರ್ಕಾರ ನಡೆಸಿ, ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಬದಲು ವಿರೋಧ ಪಕ್ಷಗಳನ್ನು ಅಸ್ಥಿರಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡು ರಾಜ್ಯಕ್ಕಿದ್ದ ಹೆಸರನ್ನು ಸರ್ವನಾಶ ಮಾಡಲು ಹೊರಟಿದೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಇಂದು(ಜನವರಿ.24) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರು ಒಳ್ಳೆಯ ಕೆಲಸಗಳನ್ನು ಮಾಡಲೆಂದು ಕಾಂಗ್ರೆಸ್‌ ಸರ್ಕಾರಕ್ಕೆ ಆರ್ಶೀವಾದಿಸಿದರು. ಆದರೆ ಈ ಸರ್ಕಾರದವರು ಮಾಡುತ್ತಿರುವುದೇನು? ಸರ್ಕಾರದ ಆಡಳಿತ ವಿಷಯದಲ್ಲಿ ರಾಜ್ಯಕ್ಕೆ ಇದ್ದ ಹೆಸರನ್ನು ಸರ್ವನಾಶ ಮಾಡಲು ಹೊರಟಿದೆ ಎಂದು ವಾಗ್ದಾಳಿ ನಡೆಸಿದರು.

ಸಿಎಂ ಸಿದ್ದರಾಮಯ್ಯ ಅವರು ಪಕ್ಷದಲ್ಲಿ ನಾವೆಲ್ಲರೂ ಒಂದಾಗಿದ್ದೇವೆ ಎಂದು ಹೇಳುತ್ತಲೇ ಇರುತ್ತಾರೆ. ಆವರು ಯಾರಿಗೋಸ್ಕರ ಒಂದಾಗಿದ್ದಾರೆ? ಅವರು ಒಂದಾಗಿರುವುದು ಅಧಿಕಾರ ಮತ್ತು ಕುರ್ಚಿಗಾಗಿ ಅಷ್ಟೇ. ಆದರೆ ಕುರ್ಚಿ ಕೊಟ್ಟ ಸಾರ್ವಜನಿಕರಿಗಾಗಿ ಅವರು ಏನು ಮಾಡುತ್ತಿದ್ದಾರೆ; ಏನು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.

ಮೈಕ್ರೋ ಫೈನಾನ್ಸ್‌ಗಳ ಬಗ್ಗೆ ರಾಜ್ಯ ಸರ್ಕಾರ ಸಭೆ ನಡೆಸುವ ಕುರಿತು ಮಾತನಾಡಿದ ಅವರು,
ಫೈನಾನ್ಸ್‌ ಕಂಪೆನಿಗಳು ಪರವಾನಗಿ ಇಲ್ಲದೇ ಅಣಬೆ ರೀತಿ ಹುಟ್ಟಿಕೊಂಡಿದ್ದು, ಈ ಫೈನಾನ್ಸ್‌ಗಳ ಹಾವಳಿ ಬಗ್ಗೆ ಒಂದು ತಿಂಗಳಿನಿಂದಲೂ ಚರ್ಚೆಯಾಗುತ್ತಿದೆ. ಅಲ್ಲದೇ ರಾಜ್ಯ ನಾನಾ ಕಡೆಗಳಲ್ಲಿ ಮೈಕ್ರೋ ಫೈನಾನ್ಸ್‌ ಕಂಪೆನಿಗಳಿಂದ ಜನರು ಬೇಸತ್ತು ಮನೆ-ಹಳ್ಳಿಗಳನ್ನೇ ಬಿಟ್ಟು ಹೋಗುತ್ತಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ಯಾವುದೇ ರೀತಿಯ ಕ್ರಮವನ್ನು ಕೈಗೊಂಡಿಲ್ಲ. ಜೊತೆಗೆ ನೊಂದವರಿಗೆ ಮಾನಸಿಕ ಸ್ಥೈರ್ಯವನ್ನು ಸಹ ತುಂಬಲಿಲ್ಲ. ಈ ಫೈನಾನ್ಸ್‌ ಕಂಪೆನಿಗಳ ಕಿರುಕುಳದಿಂದ ಅನೇಕ ಜನರು ಪ್ರಾಣ ಕಳೆದುಕೊಂಡ ಮೇಲೆ, ಊರು ಬಿಟ್ಟು ಹೋದ ಮೇಲೆ ಸಭೆ ನಡೆಸಿ ಚರ್ಚಿಸಿದರೆ ಏನು ಪ್ರಯೋಜನ ಎಂದು ಲೇವಡಿ ಮಾಡಿದರು.

ಇನ್ನೂ ತನ್ನ ಸಂಸದ ಕ್ಷೇತ್ರವಾಗಿರುವ ಮಂಡ್ಯ ಜಿಲ್ಲೆಯಲ್ಲಿ ಒಟ್ಟು 60 ಖಾಸಗಿ ಫೈನಾನ್ಸ್‌ಗಳಿದ್ದು, ಅವುಗಳಲ್ಲಿ 14 ಮಾತ್ರ ಪರವಾನಗಿ ಪಡೆದವು. ಇನ್ನುಳಿದೆಲ್ಲವೂ ಕಾನೂನು ಉಲ್ಲಂಘಿಸಿ ಕೆಲಸ ಮಾಡುತ್ತಿವೆ. ಅಲ್ಲದೇ ಆ ಫೈನಾನ್ಸ್‌ ಕಂಪೆನಿಗಳ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಳ್ಳುವ ಅಧಿಕಾರ ನಮಗೆ ಇಲ್ಲ ಎಂದು ಅಲ್ಲಿನ ಜಿಲ್ಲಾಧಿಕಾರಿಯೇ ಮಾಹಿತಿ ನೀಡಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ʼನನ್ನ ಮೇಲೆ ಕ್ರಮ ಕೈಗೊಳ್ಳಲು ಧಮ್‌ ಬೇಕುʼ ಎಂಬ ಶಾಸಕ ಜಿ.ಟಿ.ದೇವೇಗೌಡರವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಜಿ.ಟಿ.ದೇವೇಗೌಡರು ದೊಡ್ಡವರಿದ್ದಾರೆ. ಪಕ್ಷದಲ್ಲಿ ತೀರ್ಮಾನಿಸಿ, ನಮ್ಮ ಶಕ್ತಿ ಏನೆಂಬುದನ್ನು ತೋರಿಸುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.

Tags: