ಎಚ್.ಡಿ.ಕೋಟೆ: ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿ ಸಾವನ್ನಪ್ಪಿರುವ ಘಟನೆ ಎಚ್.ಡಿ.ಕೋಟೆಯ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದೆ.
ಎಚ್.ಡಿ.ಕೋಟೆ ತಾಲ್ಲೂಕಿನ ಜಕ್ಕಹಳ್ಳಿ ದೇವಲಾಪುರ ಗ್ರಾಮದ ಗೀತಾ ಎಂಬುವವರೇ ಮೃತಪಟ್ಟ ಗರ್ಭಿಣಿಯಾಗಿದ್ದು, ಮೃತದೇಹದ ಮುಂದೆ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು.
ಮೃತದೇಹ ನೀಡಲು ಆಸ್ಪತ್ರೆ ಸಿಬ್ಬಂದಿ ವಿಳಂಬ ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದು, ಆಸ್ಪತ್ರೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಬೆಳಿಗ್ಗೆ ಹೆರಿಗೆ ನೋವಿನಿಂದ ಗೀತಾ ಆಸ್ಪತ್ರೆಗೆ ದಾಖಲಾಗಿದ್ದರು. ದಾಖಲಾದ ಕೆಲವೇ ಹೊತ್ತಿಗೆ ಗೀತಾ ಸಾವನ್ನಪ್ಪಿದ್ದಾರೆ. ಪೋಷಕರ ವಿರೋಧದ ನಡುವೆಯೂ ಮರಣೋತ್ತರ ಪರೀಕ್ಷೆಗೆ ವೈದ್ಯರು ಮುಂದಾಗಿದ್ದು, ಮಧ್ಯಾಹ್ನ ಕಳೆದರೂ ಮೃತದೇಹವನ್ನು ವಾರಸುದಾರರಿಗೆ ನೀಡದೇ ವಿಳಂಬ ಮಾಡಿದ್ದಾರೆ.
ಕೊನೆಗೆ ತಹಶೀಲ್ದಾರ್ ಶ್ರೀನಿವಾಸ್ ಸ್ಥಳಕ್ಕಾಗಮಿಸಿ, ಮರಣೋತ್ತರ ಪರೀಕ್ಷೆ ಮೈಸೂರಿನಲ್ಲಿ ನಡೆಸಲು ನಿರ್ಧರಿಸಿದರು. ಆದರೆ ಎಚ್.ಡಿ.ಕೋಟೆಯಲ್ಲೇ ಮರಣೋತ್ತರ ಪರೀಕ್ಷೆ ನೆರವೇರಿಸಿ ಮೈಸೂರಿಗೆ ಮೃತದೇಹ ಹೊಯ್ಯಲು ಬಿಡಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರು.
ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಎಲ್ಲರನ್ನು ಸಮಾಧಾನ ಪಡಿಸಿ ಎಚ್.ಡಿ.ಕೋಟೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸುವಂತೆ ಸೂಚನೆ ನೀಡಿದರು. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಮೃತದೇಹವನ್ನು ಹಸ್ತಾಂತರಿಸಲಾಯಿತು.