ಮೈಸೂರು : ನಗರಪಾಲಿಕೆ ಅಧಿಕಾರಿಗಳ, ನೌಕರರ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು. ನಿತ್ಯ ಕೆಲಸ ಮಾಡುವ ಪಾಲಿಕೆ ಸಿಬ್ಬಂದಿ ಹಿತವನ್ನು ಕಾಪಾಡಬೇಕು ಎಂದು ಶಾಸಕ ಜಿ.ಟಿ. ದೇವೇಗೌಡ ಒತ್ತಾಯಿಸಿದರು.
ನಗರಪಾಲಿಕೆ ಕಚೇರಿ ಎದುರು ನೌಕರರು ನಡೆಸುತ್ತಿರುವ ಅನಿರ್ಧಿಷ್ಟಾವದಿ ಮುಷ್ಕರದಲ್ಲಿ ಪಾಲ್ಗೊಂಡು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಅವರು, ಪಾಲಿಕೆ ನೌಕರರ ಹಕ್ಕುಗಳನ್ನು ಈಡೇರಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ ಮಾಡಬಾರದು. ಯಾವುದೇ ವಿಚಾರಗಳಿದ್ದರೂ ಮುಕ್ತವಾಗಿ ಮಾತುಕತೆ ನಡೆಸಿ ಸರ್ಕಾರ ತಕ್ಷಣವೇ ಸ್ಪಂದಿಸಬೇಕು. ನೌಕರರು ಬೀದಿಗಿಳಿದು ಹೋರಾಟ ಮಾಡಲು ಅವಕಾಶ ಕೊಡದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಮೈಸೂರು ಸೇರಿದಂತೆ ರಾಜ್ಯದ ಹತ್ತು ಮಹಾ ನಗರಪಾಲಿಕೆಗಳ ನೌಕರ ವರ್ಗದವರು ಅವರ ಏಳು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹೋರಾಟ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು ನೌಕರರ ತಾರತಮ್ಯ, ಸಮಸ್ಯೆಗಳನ್ನು ಪರಿಹರಿಸಬೇಕು. ನೌಕರರು, ಅಧಿಕಾರಿ ವರ್ಗದವರೊಂದಿಗೆ ಚರ್ಚಿಸಿ ಒಪ್ಪಿಗೆ ಕೊಡಬೇಕು ಎಂದು ಮನವಿ ಮಾಡಿದರು.
ಪಾಲಿಕೆ ಅಧಿಕಾರಿಗಳು, ನೌಕರರು ನಗರದ ಸ್ವಚ್ಛತೆ, ನೈರ್ಮಲ್ಯ, ಪರಿಸರ, ಆರೋಗ್ಯ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಸಿದ್ದರಾಮಯ್ಯ ಅವರು ಪೌರಕಾರ್ಮಿಕರ ನೇಮಕಾತಿ ಕಾಯಂ ಮಾಡಿ ದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಯುಜಿಡಿಯಲ್ಲಿ ಬಚ್ಚಲಿನೊಳಗೆ ನಿಂತು ಕೆಲಸ ಮಾಡುವ ನೌಕರರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಪೌರಕಾರ್ಮಿಕರೊಂದಿಗೆ ಕೆಲಸ ಮಾಡುವ ಯುಜಿಡಿ ಕಾರ್ಮಿಕರನ್ನು ಕಾಯಂ ಮಾಡಬೇಕು ಎಂದು ಒತ್ತಾಯಿಸಿದರು.



