ಮೈಸೂರು : ದಲೈಲಾಮಾ ಅವರು ಮಾನವೀಯ ಮೌಲ್ಯಗಳ ಪ್ರಚಾರಕರಾಗಿ ಸಾಕಷ್ಟು ಶ್ರಮಿಸುತ್ತಿದ್ದಾರೆ. ಸಹಾನುಭೂತಿ, ಕ್ಷಮೆ, ಸಹಿಷ್ಣುತೆ, ಸಂತೃಪ್ತಿಯನ್ನು ಉತ್ತೇಜಿಸುವ ಮಾರ್ಗಗಳನ್ನು ಬೋಧಿಸುತ್ತಿದ್ದಾರೆ. ಧಾರ್ಮಿಕ, ಸೌಹಾರ್ದತೆ, ಟಿಬೆಟಿಯನ್ ಸಂಸ್ಕೃತಿ ಸಂರಕ್ಷಣೆಯಲ್ಲಿ ಅವರ ಪಾತ್ರ ಮಹತ್ವದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ ಮಹದೇವಪ್ಪ ಹೇಳಿದರು.
ನಗರದ ಕಲಾಮಂದಿರದಲ್ಲಿ ನಡೆದ ದಕ್ಷಿಣ ಕರ್ನಾಟಕದ ನಾಲ್ಕು ಟಿಬೆಟಿಯನ್ ಸಮಿತಿ ವತಿಯಿಂದ ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರ 90ನೇ ಜನ್ಮದಿನದ ಅಂಗವಾಗಿ ಕಲಾಮಂದಿರದಲ್ಲಿ ಆಯೋಜಿಸಿದ್ದ ‘ಟಿಬೆಟ್ ಉತ್ಸವ‘ದಲ್ಲಿ ಭಾನುವಾರ ಭಾಗವಹಿಸಿ ಆವರು ಮಾತನಾಡಿದರು.
ಹುಣಸೂರು, ಬೈಲಕುಪ್ಪೆ, ಕೊಳ್ಳೇಗಾಲ ಟಿಬೆಟಿಯನ್ ಒಕ್ಕೂಟವು ಒಗ್ಗೂಡಿ ಬಹಳ ಅಚ್ಚುಕಟ್ಟಾಗಿ ಹಾಗೂ ಅರ್ಥಪೂರ್ಣವಾಗಿ 14ನೇ ದಲೈಲಾಮ ಅವರ ಜನ್ಮದಿನದ ಆಚರಿಸುತ್ತಿರುವುದು ಸಂತೋಷದ ವಿಚಾರ ಎಂದರು.
ರಾಜ್ಯದಲ್ಲಿ ಟಿಬೆಟಿನ್ನಿಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಬದ್ಧವಾಗಿದೆ. ಸಮಸ್ಯೆಗಳನ್ನು ನನ್ನ ಗಮನಕ್ಕೆ ತರಲು ಮುಕ್ತ ಅವಕಾಶವಿದೆ. ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಂಡಿರುವ ನೀವು ನಿಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚುನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಬಳಿಕ ಕಲಾಮಂದಿರದ ಆವರಣದಲ್ಲಿ ನಿರ್ಮಿಸಿದ್ದ ಮಳಿಗೆಗಳನ್ನು ವೀಕ್ಷಿಸಿ, ಟಿಬೆಟಿಯನ್ ಚಿತ್ರಕಲೆ, ಮರಳಿನಲ್ಲಿ ಬಿಡಿಸುವ ರಂಗೋಲಿ, ವಿವಿಧ ಪ್ರಕಾರದ ಕಲಾಕೃತಿಗಳು ಹಾಗೂ ಟಿಬೆಟ್ಟಿಯನ್ನರ ಪಾರಂಪರಿಕ ಆಹಾರಗಳನ್ನು ಕುರಿತು ಮಾಹಿತಿ ಪಡೆದರು. ಈ ವೇಳೆ ಟಿಬೆಟಿಯನ್ ಪ್ರಮುಖ ಮುಖಂಡರು ಜೊತೆಗಿದ್ದರು.





