ಮೈಸೂರು: ಬಿಎ, ಎಲ್‌ಎಲ್‌ಬಿ ಐದು ವರ್ಷದ ಪದವಿ ವ್ಯಾಸಂಗದಲ್ಲಿ ಅತಿ ಹೆಚ್ಚು ಅಂಕಗಳಿಸಿ ಉತ್ತೀರ್ಣರಾಗಿದ್ದ ಪ್ರತಿಕ್ಷ ಪಾವಸ್ಕರ್ ಅವರು ಸಿದ್ದರಾಮಯ್ಯ 75ನೇ ಅಮೃತ ಮಹೋತ್ಸವದ ಚಿನ್ನದ ಪದಕ ಹಾಗೂ ಘಟಿಕೋತ್ಸವ ಪ್ರಮಾಣ ಪತ್ರವನ್ನು ಮುಡಿಗೇರಿಸಿಕೊಂಡಿದ್ದಾರೆ.
ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಬಿಜೆ. ವಿಜಯ್ ಕುಮಾರ್ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಪದಾಧಿಕಾರಿಗಳು 6.8.2022 ರಂದು ಸಭೆ ಸೇರಿ ಸಿದ್ದರಾಮಯ್ಯ ಅವರಿಗೆ 75 ವರ್ಷ ತುಂಬಿದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಶಾಶ್ವತ ಚಿನ್ನದ ದತ್ತಿ ನೀಡುವ ನಿರ್ಣಯವನ್ನ ಅಂಗೀಕರಿಸಿತ್ತು.
ಈ ಅಂಗೀಕಾರದ ಅನ್ವಯ ಪ್ರತಿ ವರ್ಷ ಘಟಿಕೋತ್ಸವದ ವೇಳೆ ಬಿಎ, ಎಲ್‌ಎಲ್‌ಬಿ ಐದು ವರ್ಷದ ಪದವಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ/ ವಿದ್ಯಾರ್ಥಿನಿಗೆ ಸಿದ್ದರಾಮಯ್ಯ 75 ಅಮೃತ ಮಹೋತ್ಸವ ಚಿನ್ನದ ಪದಕವನ್ನು ನೀಡಲಾಗುತ್ತಿತ್ತು. ಅಂತೆಯೇ 2024-25ನೇ ಶೈಕ್ಷಣಿಕ ವರ್ಷದಲ್ಲಿ ಪ್ರತಿಕ್ಷ ಪಾವಸ್ಕರ್ ಅವರಿಗೆ ಸಿದ್ದರಾಮಯ್ಯ ಹೆಸರಿನ ಚಿನ್ನದ ಪದಕವನ್ನು ನೀಡಲಾಗಿತ್ತು.
ಜಿಲ್ಲಾ ಕಾಂಗ್ರೆಸ್ ಸಮಿತಿ ಈ ವಿಷಯವನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದಾರೆ. ಈ ವಿಷಯ ತಿಳಿದ ತಕ್ಷಣವೇ ಸಿಎಂ ಸಿದ್ದರಾಮಯ್ಯ ಅವರು ಸ್ವತಃ ಪ್ರತಿಕ್ಷಾ ಅವರನ್ನು ತಮ್ಮ ಮೈಸೂರು ನಿವಾಸಕ್ಕೆ ಕರೆಸಿ ಅಭಿನಂದಿಸಿದ್ದಾರೆ.
ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿ, ನನ್ನ ಹೆಸರಿನಲ್ಲಿ ಚಿನ್ನದ ಪದಕದ ದತ್ತಿ ನೀಡಿದ್ದು ನನಗೆ ಗೊತ್ತಿರಲಿಲ್ಲ. ಆದರೆ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರತಿಭಾನ್ವಿತರನ್ನ ಪ್ರೋತ್ಸಾಹಿಸುವ ಈ ಉದ್ದೇಶ ತುಂಬಾ ಉತ್ತಮ ಬೆಳವಣಿಗೆಯಾಗಿದೆ ಎಂದರು. ಜೊತೆಗೆ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯವೈಖರಿ ಹಾಗೂ ಕಳೆದ ಎಲ್ಲಾ ಚುನಾವಣೆಗಳಲ್ಲಿ ಪಕ್ಷದ ಶ್ರಮ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಪ್ರಾಮಾಣಿಕ ಹೋರಾಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮಾರ್ಚ್ 15 ರಂದು ಶಂಕು ಸ್ಥಾಪನೆ
ಇದೇ ಸಂದರ್ಭದಲ್ಲಿ ಮೈಸೂರಿನ ರೈಲ್ವೆ ನಿಲ್ದಾಣದ ಪಕ್ಕದ ಖಾಲಿ ಜಾಗದಲ್ಲಿ ಕಾಂಗ್ರೆಸ್ ಭವನಕ್ಕೆ ಮುಂಬರುವ ಮಾರ್ಚ್ 15 ರಂದು ಶಂಕು ಸ್ಥಾಪನೆ ನೆರವೇರಿಸಲಾಗುತ್ತದೆ. ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲು ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ಬಿಜೆ. ವಿಜಯಕುಮಾರ್ ಹಾಗೂ ಪದಾಧಿಕಾರಿಗಳಿಗೆ ಸೂಚನೆ ನೀಡಿದರು.