ಮೈಸೂರು: ಲೋಕಾಯುಕ್ತಕ್ಕೆ ಮುಡಾ ವಿಚಾರವಾಗಿ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ. ಆದರೆ ನಾನಾಗಲಿ ಅಥವಾ ಶಾಸಕ ಜಿ.ಡಿ.ಹರೀಶ್ ಗೌಡ ಅವರಾಗಲಿ ಯಾವುದೆ ಅಕ್ರಮ ಮಾಡಿಲ್ಲ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.
ಮೈಸೂರಿನಲ್ಲಿ ಇಂದು(ಫೆಬ್ರವರಿ.1) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಜಮೀನಿನ ಭೂ ಮಾಲೀಕರೇ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಮುಡಾದಲ್ಲಿ ಅಕ್ರಮ ಮಾಡಿರೋರ ವಿಚಾರದ ಹೊರಗೆ ಬರುತ್ತಿಲ್ಲ. ಆದರೆ ಅಕ್ರಮ ಮಾಡದೇ ಇರೋರರ ಬಗ್ಗೆ ಪ್ರತಿನಿತ್ಯ ಚರ್ಚೆ ಆಗುತ್ತಿದೆ. ಹೀಗಾಗಿ ಮೈಸೂರು ಮಹಾರಾಜರು ಕಟ್ಟಿದ ಮುಡಾದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದೆ. ಮುಡಾ ಹಗರಣದ ಬಗ್ಗೆ ಮೈಸೂರು ಲೋಕಾಯುಕ್ತ ಅಧಿಕಾರಿಗಳು ಮತ್ತು ಜಾರಿ ನಿರ್ದೇಶನಾಲಯ ತನಿಖೆ ಮಾಡುತ್ತಿದೆ. ಹೀಗಾಗಿ ಸತ್ಯಾಸತ್ಯತೆ ಹೊರ ಬರಬೇಕಿದೆ. ಆ ನಂತರ ಮುಡಾ ಅಭಿವೃದ್ಧಿ ಆಗಬೇಕು ಎಂದು ಹೇಳಿದರು.
ಇದೇ ವೇಳೆ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ವಿಚಾರವಾಗಿ ಮಾತನಾಡಿದ ಅವರು, ಕಳೆದ ವರ್ಷಗಳಲ್ಲಿ ಭೀಕರವಾಗಿ ಕಾಡಿದ ಕೊರೋನಾ ವೈರಸ್‌ನಂತೆ ಮೈಕ್ರೋ ಫೈನಾನ್ಸ್‌ಗಳು ಇದೀಗ ರಾಜ್ಯಾದಾದ್ಯಂತ ಹರಡಿದೆ. ಅಲ್ಲದೇ ಈಗ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ತರಲು ಮುಂದಾಗಿದೆ. ಹೀಗಾಗಿ ನಾವು ಸರ್ಕಾರದ ಈ ನಿರ್ಧಾರವನ್ನು ಸ್ವಾಗತ ಮಾಡಲಿದ್ದು, ಮೈಕ್ರೋ ಫೈನಾನ್ಸ್‌ಗಳಿಗೆ ಕಡಿವಾಣ ಹಾಕಬೇಕು ಎಂದರು.