Mysore
17
few clouds

Social Media

ಬುಧವಾರ, 28 ಜನವರಿ 2026
Light
Dark

ಮೈಸೂರು- ಉದಯಪುರ ಪ್ಯಾಲೇಸ್ ಕ್ವೀನ್ ರೈಲಿನಲ್ಲಿ ಬೆಂಕಿ : ಕೆಲ ರೈಲುಗಳ ವ್ಯತ್ಯಯ

Mysore-Udaipur Palace Queen train

ಚನ್ನಪಟ್ಟಣ: ತಾಲ್ಲೂಕಿನ ವಂದಾರಗುಪ್ಪೆ ಬಳಿ ಮೈಸೂರು- ಉದಯಪುರ ನಡುವೆ ಸಂಚರಿಸುವ ಪ್ಯಾಲೇಸ್ ಕ್ವೀನ್ ಹಮ್ ಸಫರ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: ೧೯೬೬೮) ರೈಲಿನ ಇಂಜಿನ್‌ನಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಮೈಸೂರಿನಿಂದ ಹೊರಟಿದ್ದ ರೈಲು ಬೆಳಿಗ್ಗೆ ೧೧.೪೫ರ ಸುಮಾರಿಗೆ ಚನ್ನಪಟ್ಟಣ ನಿಲ್ದಾಣ ದಾಟಿ ವಂದಾರಗುಪ್ಪೆ ಬಳಿ ಚಲಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಇದನ್ನು ಗಮನಿಸಿದ ಲೋಕೊಪೈಲಟ್ ಕೂಡಲೇ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿ ರೈಲು ನಿಲ್ಲಿಸಿದರು.

ಸ್ಥಳಕ್ಕೆ ಬಂದ ಚನ್ನಪಟ್ಟಣ ಅಗ್ನಿಶಾಮಕ ದಳದ ಸಿಬ್ಬಂದಿ ರೈಲ್ವೆ ನೌಕರರ ಸಹಕಾರದೊಂದಿಗೆ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು. ಬಳಿಕ ಸ್ಥಳಕ್ಕೆ ಬೇರೆ ಇಂಜಿನ್ ತಂದು ಅಳವಡಿಸಿದ ನಂತರ ರೈಲು ಹೊರಟಿತು. ಈ ಘಟನೆಯಿಂದಾಗಿ ಕೆಲ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿತ್ತು ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.

ಮೆಮು ರೈಲುಗಳ ಸಂಚಾರ ಭಾಗಶಃ ರದ್ದು: ಜೋಲಾರಪೇಟೆಯಲ್ಲಿ ನಡೆಯುತ್ತಿರುವ ಸುರಕ್ಷತಾ ಕಾಮಗಾರಿಗಳ ಹಿನ್ನೆಲೆಯಲ್ಲಿ, ಜುಲೈ ೭ ರಿಂದ ಜುಲೈ ೧೦ರವರೆಗೆ ನಾಲ್ಕು ದಿನಗಳ ಕಾಲ ಮೆಮು ರೈಲು ಸೇವೆಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ.

೧. ರೈಲು ಸಂಖ್ಯೆ ೬೬೫೫೦ ಕೆಎಸ್‌ಆರ್ ಬೆಂಗಳೂರು-ಜೋಲಾರಪೇಟೆ ಮೆಮು ಎಕ್ಸ್ ಪ್ರೆಸ್ ರೈಲು ಸೋಮನಾಯಕನಪಟ್ಟಿ ಮತ್ತು ಜೋಲಾರಪೇಟೆ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಇದು ಜೋಲಾರಪೇಟೆ ಬದಲಿಗೆ ಸೋಮನಾಯಕನಪಟ್ಟಿಯಲ್ಲಿ ತನ್ನ ಸಂಚಾರವನ್ನು ಕೊನೆಗೊಳಿಸಲಿದೆ.

೨. ರೈಲು ಸಂಖ್ಯೆ ೬೬೫೪೯ ಜೋಲಾರಪೇಟೆ, ಕೆಎಸ್‌ಆರ್ ಬೆಂಗಳೂರು ಮೆಮು ಎಕ್ಸ್ ಪ್ರೆಸ್ ರೈಲು ಜೋಲಾರಪೇಟೆ ಮತ್ತು ಸೋಮನಾಯಕನಪಟ್ಟಿ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಇದು ಜೋಲಾರಪೇಟೆ ಬದಲಿಗೆ ಸೋಮನಾಯಕನ ಪಟ್ಟಿಯಿಂದ ತನ್ನ ಸಂಚಾರವನ್ನು ಆರಂಭಿಸಲಿದೆ.

Tags:
error: Content is protected !!