ಮೈಸೂರು : ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಹನುಮ ಜಯಂತ್ಯೋತ್ಸವ ಸಮಿತಿ ವತಿಯಿಂದ ಶನಿವಾರ ನಡೆದ ಏಳನೇ ವರ್ಷದ ಹನುಮೋತ್ಸವ ಮೆರವಣಿಗೆಯು ಸಹಸ್ರ ಸಹಸ್ರಾರು ಸಾರ್ವಜನಿಕರ ಗಮನ ಸೆಳೆಯಿತಲ್ಲದೆ, ಶಾಂತಿಯುತವಾಗಿ ಅತ್ಯಂತ ವೈಭವದಿಂದ ಜರುಗಿತು.
ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮೊದಲಿಗೆ ಹೋಮ-ಹವನ ನಡೆಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ, ತುಳಸಿ,ಮೈಸೂರು ಮಲ್ಲಿಗೆ, ವೀಳ್ಯೆದೆಲೆ, ಹಲಸಂದೆಯಿಂದ ಮಾಡಿದ್ದ ವಡೆ, ನಿಪ್ಪಟ್ಟು ಹಾರವನ್ನು ಹಾಕಿ ಹೂವಿನ ಅಲಂಕಾರದಿಂದ ಸಿಂಗಾರಗೊಳಿಸಲಾಗಿದ್ದ ಹನುಮಮೂರ್ತಿಗೆ ಪೂಜೆ ಸಲ್ಲಿಸಲಾಯಿತು.
ನಂತರ, ಶಾಸಕರಾದ ಜಿ.ಟಿ.ದೇವೇಗೌಡ,ಜಿ.ಡಿ.ಹರೀಶ್ ಗೌಡ,ಮಾಜಿ ಸಂಸದ ಪ್ರತಾಪ್ ಸಿಂಹ,ಮಾಜಿ ಶಾಸಕ ಎಲ್.ನಾಗೇಂದ್ರ ಮತ್ತಿತರರು ಪುಷ್ಪನಮನ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ತೆರೆದ ವಾಹನದಲ್ಲಿ ವಿರಾಜಮಾನರಾಗಿ ನಿಂತಿದ್ದ ಹನುಮಮೂರ್ತಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಮೆರವಣಿಗೆಗೆ ಚಾಲನೆ ನೀಡಿ ನಂದೀಧ್ವಜಕ್ಕೆ ಪೂಜೆ ಸಲ್ಲಿಸಿದರು. ನಂತರ ಹೊರಟ ಆಂಜನೇಯ ಮೂರ್ತಿಗಳ ಮೆರವಣಿಗೆಯು ದೊಡ್ಡಗಡಿಯಾರ,ಅಶೋಕ ರಸ್ತೆ, ಇರ್ವಿನ್ ರಸ್ತೆ, ಆಯುರ್ವೇದ ಕಾಲೇಜು ವೃತ್ತ,ಸಯ್ಯಾಜಿರಾವ್ ರಸ್ತೆ,ಚಿಕ್ಕಗಡಿಯಾರ ವೃತ್ತ, ಡಿ.ದೇವರಾಜ ಅರಸು ರಸ್ತೆ,ನಾರಾಯಣಶಾಸ್ತ್ರಿ ರಸ್ತೆ, ಶಾಂತಲಾ ಚಿತ್ರಮಂದಿರ ವೃತ್ತ,ಚಾಮರಾಜ ಜೋಡಿ ರಸ್ತೆ, ಬಸವೇಶ್ವರ ವೃತ್ತ, ಶ್ರೀಶಿವರಾತ್ರಿರಾಜೇಂದ್ರ ವೃತ್ತದ ಮೂಲಕ ಹಾದು ಗನ್‌ಹೌಸ್‌ನಲ್ಲಿ ಅಂತ್ಯಗೊಂಡಿತು. ರಾವಣನ ವಿರುದ್ಧ ಸೆಣಸಾಡುವಾಗ ಗದೆಯನ್ನು ಎತ್ತಿದ ಹನುಮಂತ, ಜೈಶ್ರೀರಾಮ್ ಎನ್ನುವಂತೆ ಕೈಯಲ್ಲಿ ಗದೆ ಹಿಡಿದು ನಿಂತಿರುವುದು, ಓಂ ಅಕ್ಷರದ ಎದುರು ನಿಂತಿದ್ದ ಆಂಜನೇಯ ಸೇರಿದಂತೆ ವಿವಿಧ ಮಾದರಿಯ ಮೂರ್ತಿಗಳು ಗಮನ ಸೆಳೆದರೆ, ತಪಸ್ಸು ಕುಳಿತಿದ್ದ ಈಶ್ವರನ ಮೂರ್ತಿ ಮನಮೋಹಕವಾಗಿ ಭಕ್ತಾದಿಗಳನ್ನು ಆಕರ್ಷಿಸಿತು.
ಇದನ್ನೂ ಓದಿ:-ಮೈಸೂರು | ಬೆಳ್ಳಂಬೆಳಗ್ಗೆ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಹತ್ಯೆ!
ದಾರಿಯುದ್ದಕ್ಕೂ ಕೇಸರಿ ಶಾಲು,ಟೀಶರ್ಟ್‌ಗಳನ್ನು ಧರಿಸಿದ್ದ ಯುವಕರು ದೊಡ್ಡ ದೊಡ್ಡದಾದ ಬಾವುಟಗಳನ್ನು ಹಿಡಿದು ಜೈಶ್ರೀರಾಮ್,ಜೈ ಜೈ ಶ್ರೀರಾಮ, ಪವನಸುತ ಹನುಮಾನ್‌ಕೀ ಜೈ ಮೊದಲಾದ ಘೋಷಣೆಗಳನ್ನು ಮೊಳಗಿಸಿದರು. ನಟ ಶಿವರಾಜಕುಮಾರ್ ಅಭಿನಯದ ವಜ್ರಕಾಯ ಚಿತ್ರದ ಜೈ ಆಂಜನೇಯ ಹಾಡಿಗೆ ನೂರಾರು ಯುವಕರು ದಾರಿಯುದ್ದಕ್ಕೂ ಕುಣಿದು ಕುಪ್ಪಳಿಸಿದರೆ, ಹನುಮೋತ್ಸವ ಸಮಿತಿ ಕಾರ್ಯಕರ್ತರು ಪ್ರತಿಯೊಂದು ಹನುಮಮೂರ್ತಿಗಳ ಮುಂದೆ ಭಜನೆ,ಜೈಕಾರ ಹೇಳಿಕೊಂಡು ಜತೆಗೆ ಹೆಜ್ಜೆ ಹಾಕಿದರು. ನಂದಿಕಂಬ, ವೀರಗಾಸೆ, ಕಂಸಾಳೆ, ಬೀಸುಕಂಸಾಳೆ,ಗಾರುಡಿಗೊಂಬೆ,ಡೊಳ್ಳುಕುಣಿತ,ನಗಾರಿ, ಕಾಡಿನ ಮಕ್ಕಳ ವೇಷಧಾರಿಗಳು, ಪೂಜಾ ಕುಣಿತ, ಒಂಟಿ ಬಸವ ಕಲಾವಿದರು ದಾರಿಯುದ್ದಕ್ಕೂ ತಮ್ಮದೇ ಆದ ಶೈಲಿಯಲ್ಲಿ ನೃತ್ಯ ಪ್ರದರ್ಶಿಸಿ ಮೆರಗು ತಂದುಕೊಟ್ಟರು. ಕೆಲ ಪೋಷಕರು ತಮ್ಮ ಮಕ್ಕಳಿಗೆ ಹನುಮಂತನ ವೇಷ ಧರಿಸಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿಸಿದರು.ಕೆಲವರು ಈ ಮಕ್ಕಳೊಂದಿಗೆ ಸೆಲಿ ಕ್ಲಿಕ್ಕಿಸಿಕೊಂಡರು.ಮಾಜಿ ಮಹಾಪೌರರಾದ ಎಸ್.ಸಂದೇಶ್ ಸ್ವಾಮಿ, ಶಿವಕುಮಾರ್, ಲಾಗೈಡ್ ಕಾನೂನು ಮಾಸಪತ್ರಿಕೆ ಸಂಪಾದಕ ಎಚ್.ಎನ್.ವೆಂಕಟೇಶ್, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಎಂ.ಶಿವಕುಮಾರ್,ನಗರಪಾಲಿಕೆಮಾಜಿ ಸದಸ್ಯರಾದ ಎಂ.ಸತೀಶ್, ಛಾಯಾದೇವಿ, ವಿವಿ ಸಿಂಡಿಕೇಟ್ ಸದಸ್ಯ ಗೋಕುಲ್ ಗೋವರ್ಧನ್, ಹನುಮಂತ್ಯೋತ್ಸವ ಸಮಿತಿಯ ಸಂಜಯ್, ಶಂಭು,ಮನು, ಅಪ್ಪಿಮೊದಲಾದವರು ಪಾಲ್ಗೊಂಡಿದ್ದರು.





