Mysore
22
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಬೆಳೆ ಪರಿಹಾರ ಹೆಚ್ಚಿಸುವಂತೆ ಆಗ್ರಹಿಸಿ ರೈತರ ಪ್ರತಿಭಟನೆ 

ಮೈಸೂರು : ಮಳೆ, ಪ್ರವಾಹ, ಪ್ರಕೃತಿ ವಿಕೋಪಗಳಂತಹ ಸಂದರ್ಭಗಳಲ್ಲಿ ಬೆಳೆ ನಷ್ಟವಾದ ರೈತರಿಗೆ ನೀಡುತ್ತಿರುವ ಪರಿಹಾರ ಅವೈಜ್ಞಾನಿಕವಾಗಿದ್ದು, ಕೂಡಲೇ ಪರಿಹಾರ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.

ನಗರದ ಡಿಸಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ನಾನಾ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮಳೆ, ಪ್ರವಾಹ, ಪ್ರಕೃತಿ ವಿಕೋಪವಾದಾಗ ಬೆಳೆ ನಷ್ಟ ಪರಿಹಾರ ನೀಡುವ ಎನ್‌ಡಿಆರ್‌ಎಫ್ ಮಾನದಂಡಕ್ಕೆ ತಿದ್ದುಪಡಿ ಮಾಡಿ ಪರಿಹಾರ ಹೆಚ್ಚಳ ಮಾಡಬೇಕು. ಪ್ರಸಕ್ತ ಇರುವ ಪರಿಹಾರ ಅವೈಜ್ಞಾನಿಕವಾಗಿದೆ. ಮಳೆ ಆಶ್ರಯದ ಬೆಳೆ ನಷ್ಟಕ್ಕೆ ಎಕರೆಗೆ ಕನಿಷ್ಠ ೨೫,೦೦೦ ರೂ., ನೀರಾವರಿ ತೋಟಗಾರಿಕೆ ಬೆಳೆಗಳಿಗೆ ಎಕರೆಗೆ ಕನಿಷ್ಠ ೪೧,೦೦೦ ರೂ., ವಾಣಿಜ್ಯ ಬೆಳೆಗಳಿಗೆ ಎಕರೆಗೆ ೬೦,೦೦೦ ರೂ.ಗಳಿಗೆ ಏರಿಕೆ ಮಾಡಬೇಕು. ಎನ್‌ಡಿಆರ್‌ಎಫ್ ಮಾನದಂಡ ಎಂಟು ವರ್ಷಗಳಿಂದ ಅವೈಜ್ಞಾನಿಕವಾಗಿದ್ದು, ಪುನರ್ ಪರಿಶೀಲನೆ ಆಗಿಲ್ಲ. ಹೀಗಾಗಿ ಕೂಡಲೇ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: ನೈಋತ್ಯ ಮುಂಗಾರಿನಲ್ಲಿ ಸುಮಾರು 12.54 ಲಕ್ಷ ಹೆಕ್ಟೇರ್‌ ಬೆಳೆ ಹಾನಿ

ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕದಲ್ಲಿ ರೈತರ ಬೆಳೆ ನಷ್ಟವಾಗಿದೆ. ಕೇಂದ್ರ ಸರ್ಕಾರ ಪಂಜಾಬ್‌ಗೆ ವಿಶೇಷ ಪ್ಯಾಕೇಜ್ ನೀಡಿರುವಂತೆ ಕರ್ನಾಟಕ ರಾಜ್ಯಕ್ಕೂ ವಿಶೇಷ ಪ್ಯಾಕೇಜ್‌ನಡಿ ೫,೦೦೦ ಕೋಟಿ ರೂ. ನೀಡಬೇಕು. ಈ ಬಗ್ಗೆ ರಾಜ್ಯದ ಕೇಂದ್ರ ಸಚಿವರು ಒತ್ತಾಯಿಸಬೇಕು. ಪ್ರಸಕ್ತವಾಗಿ ಬೆಳೆ ನಷ್ಟ ಅನುಭವಿಸುತ್ತಿರುವ ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಜಿಲ್ಲಾಧ್ಯಕ್ಷ ಸೋಮಶೇಖರ್, ಮುಖಂಡರಾದ ಮಾರಬಳ್ಳಿ ನೀಲಕಂಠಪ್ಪ, ಅಂಬಳೆ ಮಂಜುನಾಥ್, ಲಕ್ಷ್ಮಿಪುರ ವೆಂಕಟೇಶ್, ಕೋಟೆ ರಾಜೇಶ್, ಜಯರಾಮೇಗೌಡ, ಕಾಟೂರು ಮಹದೇವಸ್ವಾಮಿ, ಗಿರೀಶ್, ವಾಜಮಂಗಲ ನಾಗೇಂದ್ರ, ರಂಗರಾಜು, ಬಾಲು, ವರಕೂಡು ನಾಗೇಶ್, ದೇವನೂರು ವಿಜಯೇಂದ್ರ, ಮಹದೇವು, ರಾಜು, ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಭತ್ತ ಖರೀದಿ ಕೇಂದ್ರ ತೆರೆಯಲು ಒತ್ತಾಯ…

ಎರಡು ವರ್ಷಗಳ ಹಿಂದೆ ರಾಜ್ಯ ಸರ್ಕಾರ ಘೋಷಣೆ ಮಾಡಿದಂತೆ ಟನ್ ಕಬ್ಬಿಗೆ ೧೫೦ ರೂ. ಹೆಚ್ಚುವರಿ ಹಣವನ್ನು ಕಾರ್ಖಾನೆಗಳಿಂದ ರೈತರಿಗೆ ಕೊಡಿಸಬೇಕು. ಕಬ್ಬಿನ ತೂಕದಲ್ಲಿ ಮೋಸ ತಪ್ಪಿಸಲು ಸಕ್ಕರೆ ಕಾರ್ಖಾನೆ ಮುಂಭಾಗ ಸರ್ಕಾರದ ವತಿಯಿಂದ ತೂಕದ ಯಂತ್ರ ಸ್ಥಾಪಿಸಬೇಕು. ಕೃಷಿ ಬಳಕೆಗೆ ಇದ್ದ ನರೇಗಾ ಯೋಜನೆ ಸ್ಥಗಿತಗೊಂಡಿದ್ದು, ಪುನರಾರಂಭಿಸಿಬೇಕು. ಭತ್ತದ ಕನಿಷ್ಠ ಬೆಂಬಲ ಬೆಲೆ ೨,೩೬೯ ರೂ.ಗೆ ಪ್ರೋತ್ಸಾಹ ಧನ ೫೦೦ ರೂ. ನೀಡಿ (ಪ್ರತಿ ಕ್ವಿಂಟಾಲ್‌ಗೆ) ರೈತರಿಂದ ಭತ್ತ ಖರೀದಿಸಲು ರಾಜ್ಯ ಸರ್ಕಾರ ಖರೀದಿ ಕೇಂದ್ರ ತೆರೆಯಬೇಕು ಎಂದು ರೈತರು ಆಗ್ರಹಿಸಿದರು.

Tags:
error: Content is protected !!