Mysore
17
few clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಜನರಿಗೆ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಿ: ಗುರುಸ್ವಾಮಿ

ಮೈಸೂರು : ರಾಜ್ಯ ಸರ್ಕಾರದ ಮಹತ್ವದ ಐದು ಗ್ಯಾರಂಟಿ ಯೋಜ‌ನೆಗಳನ್ನು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿಸಬೇಕು. ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾ‌ನ ಸಮಿತಿಯ ತಾಲ್ಲೂಕು ಅಧ್ಯಕ್ಷರಾದ ಗುರುಸ್ವಾಮಿ ತಿಳಿಸಿದರು.

ತಾಲ್ಲೂಕು ಪಂಚಾಯಿತಿಯಲ್ಲಿ ಸೋಮವಾರ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರವು ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಅಭೂತಪೂರ್ವ ಯಶಸ್ಸು ಕಂಡಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಇಲಾಖಾ ಅಧಿಕಾರಿಗಳು ಹಾಗೂ ಸಮಿತಿಯು ಪರಸ್ಪರ ಸಮನ್ವಯದಿಂದ ಕೆಲಸ ಮಾಡಬೇಕಿದೆ ಎಂದು ನುಡಿದರು.

ಅನ್ನಭಾಗ್ಯ ಯೋಜನೆಯಡಿ ತಾಲ್ಲೂಕಿನಲ್ಲಿ ಒಟ್ಟು 98,873 ಪಡಿತರ ಚೀಟಿಗಳ ಕುಟುಂಬದ ಸದಸ್ಯರು ಸೌಲಭ್ಯ ಪಡೆಯುತ್ತಿದ್ದಾರೆ. ಸರ್ಕಾರದ ಮಾರ್ಗಸೂಚಿ ಅನ್ವಯ ಆಹಾರ ಧಾನ್ಯಗಳನ್ನು ನಿಗದಿತ ಸಮಯಕ್ಕೆ ವಿತರಿಸಬೇಕು. ವಿಳಂಬ ಧೋರಣೆ ಅನುಸರಿಸುವ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ನೋಟಿಸ್ ನೀಡಬೇಕು ಎಂದು ಸೂಚಿಸಿದರು.

ಗೃಹಲಕ್ಷ್ಮೀ ಸೌಲಭ್ಯ ಪಡೆಯಲು ತಾಂತ್ರಿಕ ಸಮಸ್ಯೆ ಕಂಡುಬಂದರೆ ತಕ್ಷಣ ಸ್ಪಂದಿಸಬೇಕು. ಯುವ ನಿಧಿ ಯೋಜನೆಯಲ್ಲಿ 4,297 ಫಲಾನುಭವಿಗಳಿದ್ದು, ಇನ್ನೂ ಹೆಚ್ಚಿನ ಅಭ್ಯರ್ಥಿಗಳನ್ನು ನೋಂದಣಿ ಮಾಡಿಸಬೇಕು. ಗೃಹಜ್ಯೋತಿಯಲ್ಲಿ ಸೌಲಭ್ಯ ಒದಗಿಸುವಲ್ಲಿ ಯಾವುದೇ ದೂರುಗಳ ಬರದಂತೆ ನೋಡಿಕೊಳ್ಳಿ ಎಂದು ತಿಳಿಸಿದರು.

ಶಕ್ತಿ ಯೋಜನೆಯು ಮಹಿಳೆಯರ ಸ್ವಾವಲಂಭಿ ಬದುಕಿಗೆ ನೆರವಾಗಿದೆ ಎಂದರು. ಈ ನಡುವೆ ಬಸ್‌ಗಳನ್ನು ಬೇಜವಾಜ್ದಾರಿಯಿಂದ ಚಾಲನೆ ಮಾಡುವ ಬಗ್ಗೆ ದೂರುಗಳು ಬರುತ್ತಿವೆ ಎಂದು ಸಭೆಯಲ್ಲಿ ಸದಸ್ಯರು ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿ, ಅಂತಹ ಚಾಲಕರಿಗೆ ಮನವರಿಕೆ ಮಾಡಿ. ಮುಂದುವರೆಸಿದರೆ ಕ್ರಮ ತೆಗುದಕೊಳ್ಳಿ ಎಂದು ಸಂಬಂಧಿಸಿದ ಅಧಿಕಾರಿಗೆ ಹೇಳಿದರು.

ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಿ.ಕೃಷ್ಣ ಅವರು ಮಾತನಾಡಿ, ನಾವೆಲ್ಲರೂ ಸರ್ಕಾರದ ಸೂಚನೆಯಂತೆ ಕರ್ತವ್ಯ ನಿರ್ವಹಿಸಬೇಕು. ಕಟ್ಟಕಡೆಯ ಅರ್ಹ ಫಲಾನುಭವಿಗಳಿಗೂ ಈ ಐದು ಗ್ಯಾರಂಟಿ ಯೋಜನೆಯನ್ನು ತಲುಪಿಸಲು ಶ್ರಮವಹಿಸಬೇಕು‌. ಈ ಯೋಜನೆಗಳಿಗೆ ಸಂಬಂಧಿಸಿದಂತೆ ತಾಂತ್ರಿಕ ಸಮಸ್ಯೆ ಎದುರಾದರೆ ಕೂಡಲೇ ಪರಿಹರಿಸುವ ಕೆಲಸವನ್ನು ಅಧಿಕಾರಿ ಮಾಡಬೇಕು ಎಂದು ಸೂಚಿಸಿದರು.

ನೂತನ ಕಚೇರಿ ಉದ್ಘಾಟನೆ

ತಾಲ್ಲೂಕು ಆಡಳಿತ ಕಚೇರಿಯ ಎರಡನೇ ಮಹಡಿಯಲ್ಲಿ ನಿರ್ಮಿಸಿರುವ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ನೂತನ ಕಚೇರಿಯನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾ‌ನ ಸಮಿತಿಯ ಜಿಲ್ಲಾಧ್ಯಕ್ಷರಾದ ಅರುಣ್ ಕುಮಾರ್ ಅವರು, ಉಪಾಧ್ಯಕ್ಷರಾದ ಶಿವಕುಮಾರ್, ಲತಾ ರಾಜಶೇಖರ್ ಅವರು, ಮುಡಾ ಮಾಜಿ ಅಧ್ಯಕ್ಷರಾದ ಮರಿಗೌಡ ಅವರು, ತಾಲ್ಲೂಕು ಅಧ್ಯಕ್ಷರಾದ ಗುರುಸ್ವಾಮಿ ಅವರು ಸೇರಿದಂತೆ ಸದಸ್ಯರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಯುವನಿಧಿ ನೋಂದಣಿ ಅಭಿಯಾನದ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು. ಸಭೆಯಲ್ಲಿ ಸದಸ್ಯರುಗಳಾದ ಬಿ.ರವಿ, ರಾಣಿ ಶಿವಣ್ಣ, ಮಾವಿನಹಳ್ಳಿ ನಾಗೇಶ್, ಮೊಹಮ್ಮದ್ ಆಲಿ ಬಾಬು, ಎಂ.ಸೋಮಣ್ಣ, ಕರೀಗೌಡ, ಹೆಚ್.ಡಿ.ಚನ್ನಯ್ಯ, ಮೂಡಪ್ಪ, ವಿ.ಸಿ.ಬಸವರಾಜು, ಶಂಕರ, ನಾಗರಾಜಮೂರ್ತಿ, ತಾಲ್ಲೂಕು ಯೋಜನಾಧಿಕಾರಿ ಸುರೇಶ್ ಸೇರಿದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Tags:
error: Content is protected !!