Mysore
16
overcast clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

5 ಹುಲಿಗಳ ಸಾವಿನ ಎಫೆಕ್ಟ್: ಶವಸಂಸ್ಕಾರಕ್ಕೆ ಗ್ರಾಮಸ್ಥರ ಪರದಾಟ

ನಂಜನಗೂಡು: 5 ಹುಲಿಗಳು ಸಾವನ್ನಪ್ಪಿದ ಪ್ರಕರಣ ಕೆಲವು ಗ್ರಾಮಗಳ ಮೇಲೆ ಪರೋಕ್ಷ ಬಿಸಿ ತಟ್ಟಿದೆ. ಅರಣ್ಯದೊಳಗೆ ಅನಗತ್ಯ ಪ್ರವೇಶಕ್ಕೆ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಮೃತಪಟ್ಟ ವ್ಯಕ್ತಿಗಳ ಶವಸಂಸ್ಕಾರಕ್ಕೆ ಪರದಾಡುವಂತಾಗಿದೆ.

ನಂಜನಗೂಡು ತಾಲ್ಲೂಕಿನ ಮಹದೇವನಗರ ಗ್ರಾಮದ ಜನಕ್ಕೆ ಸದ್ಯ ಈ ಬಿಸಿ ತಟ್ಟಿದ್ದು, ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿಸಲು ಪರಿಪಾಟಲು ಪಡುವಂತಾಗಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಕಾಡಂಚಿನ ಗ್ರಾಮ ಮಹದೇವನಗರ. ಇಲ್ಲಿ ಯಾರೇ ಮೃತಪಟ್ಟರೂ ಇದುವರೆಗೂ ಅರಣ್ಯ ಪ್ರದೇಶದಲ್ಲಿ ಶವಸಂಸ್ಕಾರ ಮಾಡಿಕೊಂಡು ಬರುತ್ತಿದ್ದರು.

ಕಾರಣ ಇಲ್ಲಿ ಸ್ಮಶಾನಕ್ಕೆ ಜಾಗ ಇಲ್ಲ. ಇದೀಗ ಅರಣ್ಯ ಪ್ರದೇಶಕ್ಕೆ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆ ನೆರವೇರಿಸಲು ಯಾವುದೇ ಸ್ಥಳವಿಲ್ಲ. ಗ್ರಾಮದಲ್ಲಿ ಒಂದುಕಾಲು ಎಕರೆ ಸರ್ಕಾರಿ ಜಮೀನಿದ್ದು, ಇದನ್ನು ಸ್ಮಶಾನಕ್ಕಾಗಿ ಮೀಸಲಿಡುವಂತೆ ತಾಲ್ಲೂಕು ಆಡಳಿತಕ್ಕೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ತಹಶೀಲ್ದಾರ್ ಶಿವಕುಮಾರ್ ಕಾಸ್ನೂರ್‌ ಅವರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಭರವಸೆ ಕೊಟ್ಟಿದ್ದರು. ಆದ್ರೆ ಈ ಸಂಬಂಧ ಇಲ್ಲಿಯವರೆಗೂ ಯಾವುದೇ ಕ್ರಮವಾಗಿಲ್ಲ.

ಇದೀಗ ಗ್ರಾಮದಲ್ಲಿ ಸಾವು ಸಂಭವಿಸಿದ್ದು, ಮೃತದೇಹದ ಶವಸಂಸ್ಕಾರಕ್ಕೆ ಸ್ಥಳವಿಲ್ಲದೆ ಜನರು ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲ್ಲೂಕು ಆಡಳಿತದ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದು, ಮನೆ ಮುಂದೆ ಗುಂಡಿ ತೋಡಿ ಶವ ಹೂಳಲು ನಿರ್ಧರಿಸಿದ್ದ ಜನ ಇದೀಗ ಮಹದೇವನಗರದಿಂದ 6 ಕಿಮೀ ದೂರವಿರುವ ಹೊಸವೀಡು ಗ್ರಾಮಕ್ಕೆ ಶವ ಕೊಂಡೊಯ್ಯಲು ನಿರ್ಧರಿಸಿದ್ದಾರೆ.

ಶವಸಂಸ್ಕಾರಕ್ಕಾಗಿ ಪಕ್ಕದ ಗ್ರಾಮವನ್ನು ಅವಲಂಬಿಸಬೇಕಾದ ದುರ್ಗತಿ ಎದುರಾಗಿದ್ದು, ಕೂಡಲೇ ಈ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಗ್ರಾಮದ ಮುಖಂಡರು ಒತ್ತಾಯಿಸಿದ್ದಾರೆ.

Tags:
error: Content is protected !!