ಹುಣಸೂರು: ತಾಲ್ಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಕುಡಿಯಲು ನೀರಿಲ್ಲದೇ ಜನರು ತೀವ್ರ ಪರದಾಟ ನಡೆಸುತ್ತಿರುವ ಘಟನೆ ನಡೆದಿದೆ.
ಕಳೆದ ಹತ್ತು ದಿನಗಳಿಂದ ಕುಡಿಯಲು ನೀರಿಲ್ಲದೇ ಜನರು ಹೈರಾಣಾಗಿದ್ದು, ನೀರಿಗಾಗಿ ಜಮೀನುಗಳಲ್ಲಿರುವ ಬೋರ್‌ಗಳ ಮೊರೆ ಹೋಗುತ್ತಿದ್ದಾರೆ. ನೀರಿನ ಸರಬರಾಜಿನ ಮೋಟಾರ್‌ಗಳು ಕೆಟ್ಟು ತಿಂಗಳುಗಳೇ ಕಳೆದರೂ ಅಧಿಕಾರಿಗಳು ಇದನ್ನು ಸರಿಪಡಿಸದೇ ಭಾರೀ ನಿರ್ಲಕ್ಷ್ಯ ತೋರಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಕುಡಿಯುವ ನೀರಿಗೆ ಭಾರೀ ಹಾಹಾಕಾರ ಉಂಟಾಗಿದೆ.
ಇನ್ನು ಟ್ಯಾಂಕರ್‌ನಲ್ಲಿ ಬಂದ ನೀರಿಗೆ ಮಹಿಳೆಯರು ಮುಗಿಬೀಳುತ್ತಿದ್ದು, ಟ್ಯಾಂಕರ್ ನೀರು ನಮಗೆ ಸಾಕಾಗುವುದಿಲ್ಲ. ಆದಷ್ಟು ಬೇಗ ಮೋಟಾರ್‌ಗಳನ್ನು ಸರಿಪಡಿಸಿ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಾವು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಒಟ್ಟಾರೆಯಾಗಿ ಒಂದು ಕಡೆ ಬೇಸಿಗೆ ಸುಡು ಬಿಸಿಲಿನಿಂದ ಜನರು ತತ್ತರಿಸಿ ಹೋಗಿದ್ದು, ಕುಡಿಯುವ ನೀರಿಗೂ ಭಾರೀ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.





