ಮೈಸೂರು : ದೀಪಾವಳಿ ಮತ್ತು ಛಾತ್ ಹಬ್ಬಗಳ ಸಂದರ್ಭದಲ್ಲಿ ರೈಲು ಪ್ರಯಾಣಿಕರಿಗೆ ಸುಗಮ ಪ್ರಯಾಣದ ಅನುಭವವನ್ನು ನೈಋತ್ಯ ರೈಲ್ವೆ ಒದಗಿಸಿದ್ದು, ಇದಕ್ಕೆ ಪೂರಕವಾಗಿ ನೈಋತ್ಯ ರೈಲ್ವೆಯು ೧೨೪ ವಿಶೇಷ ರೈಲುಗಳ ಸೇವೆಯನ್ನು ನಿರ್ವಹಿಸಿದೆ.
ಇದು ಕಳೆದ ವರ್ಷದ ೯೦ ಸೇವೆಗೆ ಹೋಲಿಸಿದರೆ ಗಣನೀಯವಾಗಿ ಹೆಚ್ಚಳವಾಗಿದೆ. ಕಳೆದ ವರ್ಷ ಇದೇ ಅವಽಯಲ್ಲಿ ೩೦೫ ಟ್ರಿಪ್‌ಗಳು ಇದ್ದದ್ದು ಈ ಬಾರಿ ೩೪೮ ಟ್ರಿಪ್‌ಗಳಿಗೆ ಏರಿಕೆಯಾಗಿವೆ. ಅಲ್ಲದೇ ಹೆಚ್ಚುವರಿಯಾಗಿ ಇತರ ವಲಯಗಳಿಂದ ೧೩೪ ಟ್ರಿಪ್‌ಗಳನ್ನು ಒಳಗೊಂಡ ೪೦ ವಿಶೇಷ ರೈಲುಗಳು ನೈಋತ್ಯ ರೈಲ್ವೆ ಪ್ರದೇಶದ ಮೂಲಕ ಹಾದು ಹೋಗಿವೆ.
ಈ ಹಬ್ಬದ ಅವಧಿಯಲ್ಲಿ (ಅ.೧೫ರಿಂದ ಅ.೨೧ರವರೆಗೆ) ಒಂದು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ವಿಶೇಷ ರೈಲುಗಳಲ್ಲಿ ಪ್ರಯಾಣಿಸಿದ್ದು, ಇದರಿಂದ ರೈಲ್ವೆಗೆ ಸುಮಾರು ೧೦ ಕೋಟಿ ರೂ. ಆದಾಯ ಬಂದಿದೆ. ಇದರ ಜೊತೆಗೆ ೮.೫ ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಸಾಮಾನ್ಯ (ನಿತ್ಯ) ರೈಲುಗಳಲ್ಲಿ ಪ್ರಯಾಣಿಸಿದ್ದು, ರೈಲ್ವೆ ಬೊಕ್ಕಸಕ್ಕೆ ಸುಮಾರು ೬೧ ಕೋಟಿ ರೂ. ಕೊಡುಗೆ ನೀಡಿದೆ. ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ನೈಋತ್ಯ ರೈಲ್ವೆ ೩೪೦ ನಿಯಮಿತ ರೈಲುಗಳನ್ನು ನಿರ್ವಹಿಸುತ್ತಿದೆ. ಹಬ್ಬದ ಜನದಟ್ಟಣೆಯನ್ನು ನಿರ್ವಹಿಸಲು ಪ್ರಮುಖ ನಿಲ್ದಾಣಗಳಲ್ಲಿ ಪ್ರಯಾಣಿಕರ ಸೌಲಭ್ಯಗಳನ್ನು ಮತ್ತಷ್ಟು ಹೆಚ್ಚಿಸಲಾಗಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಸೌಲಭ್ಯಗಳು ಮತ್ತು ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲಾಗಿದೆ. ವೃದ್ಧರು ಮತ್ತು ವಿಶೇಷಚೇತನರು ಪ್ರಯಾಣಿಕರಿಗೆ ಬ್ಯಾಟರಿ ಚಾಲಿತ ಬೋಗಿಗಳು ಲಭ್ಯವಿದೆ. ಕಲ್ಯಾಣ ಕ್ರಮಗಳ ಭಾಗವಾಗಿ ರಕ್ಷಿಸಲ್ಪಟ್ಟ ಮಕ್ಕಳಿಗಾಗಿ ಮಕ್ಕಳ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮರಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





